Breaking
19 Sep 2026, Sat

ನಕಲಿ ಪಿಸ್ತೂಲ್ ತೋರಿಸಿ ದರೋಡೆ: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿಗೆ ನಕಲಿ ಪಿಸ್ತೂಲ್ ತೋರಿಸಿ ಚಾಕುವಿನಿಂದ ಬೆದರಿಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಚಾಮರಾಜಪೇಟೆಯ ಅಶ್ರಫ್ (22) ಹಾಗೂ ಪಾದರಾಯನಪುರದ ಅಫ್ಜಲ್ ಅಲಿಯಾಸ್ ಡಿಚ್ಚಿ (32) ಎಂದು ಗುರುತಿಸಲಾಗಿದೆ.


ಜುಲೈ 6ರಂದು ಪಾದರಾಯನಪುರ 7ನೇ ಕ್ರಾಸ್ನಲ್ಲಿರುವ ನಾಲ್ಕನೇ ಮಹಡಿಯ ಮನೆಯೊಂದರಲ್ಲಿ ತಾಯಿ ಮತ್ತು ಮಗಳು ವಾಸವಾಗಿದ್ದರು. ಕಾರ್ಯನಿಮಿತ್ತ ತಾಯಿ ಹೊರಗೆ ತೆರಳಿದ್ದ ವೇಳೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಇದೇ ವೇಳೆ ಮನೆಗೆ ನುಗ್ಗಿದ ಆರೋಪಿಗಳು ನಕಲಿ ಪಿಸ್ತೂಲ್ನಿಂದ ಬಾಲಕಿಯ ತಲೆಗೆ ಹೊಡೆದು ಗಾಯಗೊಳಿಸಿ, ಬಳಿಕ ಚಾಕುವಿನಿಂದ ಬೆದರಿಸಿ ಕೊಠಡಿಯ ಬೀರುವಿನಲ್ಲಿದ್ದ 199.71 ಗ್ರಾಂ ಚಿನ್ನಾಭರಣ ಹಾಗೂ ₹2 ಲಕ್ಷ ನಗದು ದೋಚಿ ಪರಾರಿಯಾಗಿದ್ದರು.


ತಾಯಿ ಮನೆಗೆ ಹಿಂದಿರುಗಿದ ಬಳಿಕ ನಡೆದ ಘಟನೆ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ. ನಂತರ ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತರಿಂದ ಸುಮಾರು ₹25 ಲಕ್ಷ ಮೌಲ್ಯದ 139 ಗ್ರಾಂ ಚಿನ್ನಾಭರಣ, ₹8 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *