ಬಂಟ್ವಾಳ: ತಾಲೂಕಿನ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕಳ್ಳರು ಮುಂಭಾಗದ ಬಾಗಿಲಿನ ಬೀಗ ಮುರಿದು ನುಗ್ಗಿ, ಪುರಾತನ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಳ್ಳರು ದೇವಸ್ಥಾನದಿಂದ ಬೆಳ್ಳಿಯ ಪೂಜಾ ಸಾಮಗ್ರಿಗಳು, ಒಂದು ಕೊಪ್ಪರಿಗೆ, 10 ದೀಪಗಳು, 10 ಹಿತ್ತಾಳೆಯ ಗಿಂಡಿಗಳು, 5 ಹಿತ್ತಾಳೆಯ ಹರಿವಾಣಗಳು, ತಾಮ್ರದ ಪಾತ್ರೆ, 2 ತಾಮ್ರದ ಕೊಡಪಾನ, ಒಂದು ತಾಮ್ರದ ಅಡ್ಯರ ಹಾಗೂ ಕೆಲವು ಸ್ಟೀಲ್ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹57,000 ಎಂದು ಅಂದಾಜಿಸಲಾಗಿದೆ.

ಮೂರು ಮಂದಿ ಕಳ್ಳರು ಗೋಣಿ ಚೀಲದಲ್ಲಿ ವಸ್ತುಗಳನ್ನು ತುಂಬಿಕೊಂಡು ಸಾಗುತ್ತಿರುವ ದೃಶ್ಯಗಳು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈ ಸಂಬಂಧ ದೇವಸ್ಥಾನದ ಸುನಿಲ್ ಕುಮಾರ್ ಕೆ.ಎನ್. ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



