Breaking
24 Jul 2026, Fri

ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ ಹಾಡಿಗೆ ಸ್ಪಂದಿಸಿದ ಅಧಿಕಾರಿಗಳು; ಬರೆಮೇಲು ನಡುಗುಡ್ಡೆ ಕಾಲುಸಂಕ ಪ್ರದೇಶ ಹಾಗೂ ರಸ್ತೆ ವಂಚಿತ ಬಜಕ್ರೆಸಾಲು ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ/ ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಪ್ರದೇಶದ ಕಾಲುಸಂಕದ ವಿಚಾರ ವ್ಯಾಪಕ ಚರ್ಚೆ ಆಕ್ರೋಶಕ್ಕೆ ಕಾರಣವಾಗಿತ್ತು . ಬಜಕ್ರೆಸಾಲು ಪ್ರದೇಶದ 8-10 ಪರಿಶಿಷ್ಟ ಜಾತಿ ಕುಟುಂಬಗಳು ರಸ್ತೆ ವಂಚಿತಗೊಂಡಿರುವ ಬಗ್ಗೆಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇಂದು ಈ ಪ್ರದೇಶಕ್ಕೆ ಅಧಿಕಾರಿಗಳ ದಂಡೇ ಸ್ಥಳಕ್ಕೆ ದೌಡಾಯಿಸಿದೆ.

ಗ್ರಾಮಸಭೆಯಲ್ಲಿ ಗ್ರಾಮಸ್ಥ ಶೇಖರ್ ಲಾಯಿಲ ಕಾಲುಸಂಕದಲ್ಲಿ ಶಾಲಾ ಮಕ್ಕಳು ನಡೆದಾಡುವ ಪೋಟೋ, ಹಾಗೂ ಮೂರು ವರ್ಷಗಳ ಹಿಂದೆ ಆಯಿಲ ಹೋಗುವ ರಸ್ತೆ ಬದಿಯ ಧರೆ ಕುಸಿತವಾಗಿದ್ದು ಇವುಗಳ ಪೋಟೊಗಳನ್ನು ಅಧಿಕಾರಗಳ ಮುಂದೆ ಪ್ರದರ್ಶಿಸಿದಲ್ಲದೆ, ಬಜಕ್ರೆಸಾಲು ರಸ್ತೆ ವಂಚಿತ ದಲಿತ ಕುಟುಂಬಗಳ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕವಿ ಸಿದ್ದಲಿಂಗಯ್ಯ ರವರ ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ ಎಂಬ ಹಾಡನ್ನು ಹಾಡಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 79 ವರ್ಷಗಳಾದರೂ ಇನ್ನೂ ದಲಿತ, ಆದಿವಾಸಿ ಸಮುದಾಯದ ಅಭಿವೃದ್ಧಿಯಾಗಿಲ್ಲ ಎಂದರೆ ದಲಿತ, ಆದಿವಾಸಿಗಳಿಗೆ ಇನ್ನೂ ಸ್ವಾತಂತ್ರ್ಯ ಲಭಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇಂದು ಬರೆಮೇಲು ನಡುಗುಡ್ಡೆ ಪ್ರದೇಶ ಹಾಗೂ ಬಜಕ್ರೆಸಾಲು ದಲಿತ ಕಾಲನಿಗೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದ ಇಂಜಿನಿಯರ್ ಸಂದೀಪ್ ಶೆಟ್ಟಿ ಮಂದರ್ಸ, ಸಮಾಜ ಕಲ್ಯಾಣ ಇಲಾಖೆಯ ಧೀರಾಜ್ ಕುಮಾರ್, ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ ಸುಪ್ರೀತಾ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ, ಪಂಚಾಯತ್ ಸಿಬ್ಬಂದಿ ಪ್ರದೀಪ್ ಹೋರಾಟಗಾರ ಶೇಖರ್ ಲಾಯಿಲ ಭೇಟಿ ನೀಡಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು ಬಜಕ್ರೆಸಾಲು ದಲಿತ ಕಾಲನಿಗೆ ಸರ್ಕಾರಿ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲು ಕಂದಾಯ ಇಲಾಖೆ ಅನುಮತಿ ನೀಡಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರರನ್ನು ಭೇಟಿ ನೀಡಿ ಸಮಸ್ಯೆಯನ್ನು ಮನವರಿಕೆ ಮಾಡಲಾಗುವುದು ಎಂದರು. ಬರೆಮೇಲು ನಡುಗುಡ್ಡೆ ಪ್ರದೇಶಕ್ಕೆ ಕಾಲುಸಂಕ ನಿರ್ಮಾಣದ ಬಗ್ಗೆ ಅಂದಾಜುವೆಚ್ಚ, ನೀಲನಕಾಶೆಯ ಜೊತೆಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *