Breaking
8 Sep 2026, Tue

16 ಲಕ್ಷ ಸಾಲಕ್ಕೆ 36 ಲಕ್ಷ ರೂ. ವಸೂಲಿ: ಇನ್ನೂ ಬಡ್ಡಿಗೆ ಕಿರುಕುಳ; ಚಕ್ರಬಡ್ಡಿ ದಂಧೆಕೋರ ಬಂಧನ

ಬೆಳಗಾವಿ: 16 ಲಕ್ಷ ರೂ. ಸಾಲಕ್ಕೆ 36 ಲಕ್ಷ ರೂ.ಗೂ ಹೆಚ್ಚು ಹಣವನ್ನು ಬಡ್ಡಿ ಹಾಗೂ ಅಸಲಿನ ಹೆಸರಿನಲ್ಲಿ ವಸೂಲಿ ಮಾಡಿ, ಇನ್ನೂ 4.64 ಲಕ್ಷ ರೂ. ಹೆಚ್ಚುವರಿ ಬಡ್ಡಿ ನೀಡುವಂತೆ ಕಿರುಕುಳ ನೀಡಿದ್ದ ಆರೋಪದಡಿ ಚಕ್ರಬಡ್ಡಿ ದಂಧೆಕೋರನನ್ನು ಸಂಕೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಸಂಕೇಶ್ವರ ನಿವಾಸಿ ಸದಾನಂದ ಭೀಮರಾವ ಹಲಗೆ (47) ಎಂದು ಗುರುತಿಸಲಾಗಿದೆ.

ಹುಕ್ಕೇರಿ ತಾಲೂಕಿನ ಸ್ನೇಹಾ ವಿಕಾಸ ಮೇಲಗೇರಿ ಅವರು ಜುಲೈ 20ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. 2022ರಿಂದ 2026ರ ಅವಧಿಯಲ್ಲಿ ಸ್ನೇಹಾ ದಂಪತಿ ಸದಾನಂದ ಹಲಗೆ ಅವರಿಂದ ಒಟ್ಟು ₹16,16,580 ಸಾಲ ಪಡೆದಿದ್ದರು.

ಸಾಲದ ಬಡ್ಡಿ ಹಾಗೂ ಅಸಲು ಸೇರಿ ಇದುವರೆಗೆ ₹36,77,607 ಅನ್ನು ಫೋನ್‌ಪೇ ಮತ್ತು ಆರ್‌ಟಿಜಿಎಸ್‌ ಮೂಲಕ ಪಾವತಿಸಿದ್ದರೂ, ಆರೋಪಿಯು ಮತ್ತಷ್ಟು ₹4,64,000 ಹೆಚ್ಚುವರಿ ಬಡ್ಡಿ ನೀಡುವಂತೆ ಒತ್ತಾಯಿಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಸಂಕೇಶ್ವರ ಪೊಲೀಸರು ಸದಾನಂದ ಹಲಗೆ ಅವರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪವನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *