ಬೆಳ್ತಂಗಡಿ: ಅರಣ್ಯ ಇಲಾಖೆ ಟ್ರೆಕ್ಕಿಂಗ್ ಬುಕ್ಕಿಂಗ್‌ಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಬುಕ್ಕಿಂಗ್ ರದ್ದುಪಡಿಸಿದರೆ ಇನ್ನು ಮುಂದೆ ಶೇ.50 ಮೊತ್ತ ಮಾತ್ರ ಮರುಪಾವತಿಯಾಗಲಿದೆ.

ಹೊಸ ನಿಯಮದಂತೆ, ಟ್ರೆಕ್ಕಿಂಗ್ ಸ್ಲಾಟ್‌ಗಳನ್ನು ಈಗ 15 ದಿನಗಳ ಬದಲು 30 ದಿನಗಳ ಮುಂಚಿತವಾಗಿ ಬುಕ್ ಮಾಡಬಹುದಾಗಿದೆ. ಟ್ರೆಕ್ಕಿಂಗ್‌ಗೆ ಆಗಮಿಸುವ ವೇಳೆ ಆನ್‌ಲೈನ್ ಬುಕ್ಕಿಂಗ್‌ಗೆ ಬಳಸಿದ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಇದುವರೆಗೆ ಟ್ರೆಕ್ಕಿಂಗ್ ದಿನಾಂಕಕ್ಕೆ ಏಳು ದಿನಗಳ ಮುಂಚಿತವಾಗಿ ರದ್ದು ಪಡಿಸಿದರೆ ಶೇ. 100 ಹಣ ಪಾವತಿ ದೊರೆಯುತಿತ್ತು. ಈಗ ಟ್ರೆಕ್ಕಿಂಗ್ ದಿನಾಂಕಕ್ಕೆ ಕನಿಷ್ಠ ಏಳು ದಿನಗಳ ಮೊದಲು ಬುಕ್ಕಿಂಗ್ ರದ್ದುಪಡಿಸಿದರೂ ಶೇ.50 ಮೊತ್ತ ಮಾತ್ರ ಮರಳಿಸಲಾಗುತ್ತದೆ. ಏಳು ದಿನಗಳೊಳಗೆ ಬುಕ್ಕಿಂಗ್ ರದ್ದುಪಡಿಸಿದರೆ ಯಾವುದೇ ಮರುಪಾವತಿ ದೊರೆಯುವುದಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಈ ಹಿಂದೆ ಶೇ.100 ಮರುಪಾವತಿ ಸೌಲಭ್ಯವನ್ನು ಕೆಲ ಏಜೆಂಟರು ದುರುಪಯೋಗಪಡಿಸಿಕೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಸ್ಲಾಟ್‌ಗಳನ್ನು ಬುಕ್ ಮಾಡಿ ಬಳಿಕ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದರು. ಈ ಅಕ್ರಮಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ತರಲಾಗಿದೆ.

ಅಲ್ಲದೆ, ಇನ್ನು ಮುಂದೆ ಒಮ್ಮೆ ರದ್ದುಪಡಿಸಿದ ಟ್ರೆಕ್ಕಿಂಗ್ ಸ್ಲಾಟ್ ಅನ್ನು ಮತ್ತೆ ಹೊಸ ಬುಕ್ಕಿಂಗ್‌ಗೆ ತೆರೆಯುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಎಲ್ಲಾ ಟ್ರೆಕ್ಕಿಂಗ್ ಬುಕ್ಕಿಂಗ್ ಹಾಗೂ ಪಾವತಿಗಳನ್ನು ಅರಣ್ಯ ವಿಹಾರ ವೆಬ್‌ಸೈಟ್ ಮೂಲಕವೇ ಮಾಡಬೇಕಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.


