ಮೂಡುಬಿದಿರೆ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ಜಿ.ಕೆ. ಭಟ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಾಹಿತಿಯ ಪ್ರಕಾರ, ಜಿ.ಕೆ. ಭಟ್ ಇತರ ಪ್ರಯಾಣಿಕರೊಂದಿಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಜಿ.ಕೆ. ಭಟ್ ವಾಹನದಿಂದ ಹೊರಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಾಯಗೊಂಡ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಜಿ.ಕೆ. ಭಟ್ ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರಾಗಿದ್ದು, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರು ಕಲ್ಲಬೆಟ್ಟು ಗಣೇಶೋತ್ಸವ ಸಮಿತಿ ಸೇರಿದಂತೆ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ, ಮೂಡುಬಿದಿರೆ ವಂದೇ ಮಾತರಂ ಸಹಕಾರಿಯ ನಿರ್ದೇಶಕರಾಗಿದ್ದರು.

ಅವರ ನಿಧನಕ್ಕೆ ವಂದೇ ಮಾತರಂ ಸಹಕಾರಿಯ ಅಧ್ಯಕ್ಷ ವಾಸುದೇವ ಭಟ್, ನಿರ್ದೇಶಕರು, ಸಿಬ್ಬಂದಿ ವರ್ಗ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.


