ಬೆಂಗಳೂರು: ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ನಗರದ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ದೆಹಲಿ ಮತ್ತು ರಾಜಸ್ಥಾನದಿಂದ ರೈಲಿನಲ್ಲಿ ಮಹಿಳೆಯರ ಚೂಡಿದಾರ ಹಾಗೂ ನೈಟಿಗಳಲ್ಲಿ ಮರೆಮಾಚಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಾಗಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಒಟ್ಟು ₹30.58 ಕೋಟಿ ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ಜಪ್ತಿ ಮಾಡಲಾಗಿದ್ದು, 17 ಆರೋಪಿಗಳನ್ನು ಬಂಧಿಸಲಾಗಿದೆ.

ಸಿಸಿಬಿ ಮಾದಕ ವಸ್ತು ನಿಗ್ರಹ ದಳ, ಚಾಮರಾಜಪೇಟೆ, ಕೋರಮಂಗಲ, ಬಾಣಸವಾಡಿ, ವೈಟ್ಫೀಲ್ಡ್, ಮಲ್ಲೇಶ್ವರ ಹಾಗೂ ಪುಲಕೇಶಿನಗರ ಠಾಣೆಗಳ ಪೊಲೀಸರು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ದೆಹಲಿ ಮೂಲದ ಖಾಲಿಮ್ (19), ಕನ್ನಯ್ಯ (20), ಸತ್ಯಂ (19), ಶಾಹಿಲ್ ಕುಮಾರ್ (22), ರಾಜಸ್ಥಾನದ ಲುಂಬಾರಂ ವಿಷ್ಣೋಯಿ (25), ಅನುಪ್ ರಾಮ್ ಚೌದರಿ (23) ಸೇರಿದಂತೆ ಕೇರಳ ಹಾಗೂ ತಮಿಳುನಾಡು ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 13.135 ಕೆ.ಜಿ. ಎಂಡಿಎಂಎ, 181.3 ಗ್ರಾಂ ಕೋಕೇನ್, 15 ಗ್ರಾಂ ಹೆರಾಯಿನ್, 59.322 ಕೆ.ಜಿ. ಗಾಂಜಾ, 7 ಕೆ.ಜಿ. ಅಫೀಮು, 225 ಗ್ರಾಂ ಮೆಫೆಡ್ರೋನ್, 6 ಮೊಬೈಲ್ ಫೋನ್ಗಳು, ಒಂದು ಕಾರು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಪ್ರಯಾಣಿಕರು ಮತ್ತು ವ್ಯಾಪಾರಿಗಳ ಸೋಗಿನಲ್ಲಿ ದೆಹಲಿ, ರಾಜಸ್ಥಾನ ಹಾಗೂ ಒಡಿಶಾದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು, ಮಹಿಳೆಯರ ಚೂಡಿದಾರ ಮತ್ತು ನೈಟಿಗಳ ಮೂಟೆಗಳಲ್ಲಿ ಡ್ರಗ್ಸ್ ಮರೆಮಾಚಿ ಸಾಗಿಸುತ್ತಿದ್ದರು.

ವಾರದ ಹಿಂದೆ 10 ಕೆ.ಜಿ. ಡ್ರಗ್ಸ್ ವಶಪಡಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದಾಗ ಈ ಅಂತರರಾಜ್ಯ ಡ್ರಗ್ಸ್ ಜಾಲದ ಸುಳಿವು ದೊರೆತಿದ್ದು, ತನಿಖೆ ವೇಳೆ ಹಲವು ರಾಜ್ಯಗಳ ಆರೋಪಿಗಳ ಸಂಪರ್ಕ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.


