ಬೆಂಗಳೂರು: ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ 61 ವರ್ಷದ ವೃದ್ಧೆಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆಗೈದು, ಮೃತದೇಹವನ್ನು ಸೂಟ್ಕೇಸ್ನಲ್ಲಿ ತುಂಬಿ ಕುಂಬಳಗೋಡು ಸಮೀಪದ ರಾಮೋಹಳ್ಳಿ ಕೆರೆಯಲ್ಲಿ ಎಸೆದಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.

ಚಲ್ಲಘಟ್ಟ ನಿವಾಸಿ ಜಯಮ್ಮ (61) ಮೃತ ವೃದ್ಧೆ. ಜುಲೈ 15ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದ ಜಯಮ್ಮ ಬಳಿಕ ಮನೆಗೆ ಮರಳಿರಲಿಲ್ಲ. ಅವರ ಪುತ್ರ ಜೈಕುಮಾರ್ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಜುಲೈ 16ರಂದು ನಾಪತ್ತೆ ದೂರು ದಾಖಲಿಸಿದ್ದರು.

ಜೈಕುಮಾರ್ ಆಟೋ ಚಾಲಕರಾಗಿದ್ದು, ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿ ಜಯಮ್ಮ ಅವರೊಂದಿಗೆ ಚಲ್ಲಘಟ್ಟದ ಬಿಎಂಟಿಸಿ ಬಸ್ ಡಿಪೋ ಸಮೀಪದ ಮನೆಯಲ್ಲಿ ವಾಸವಾಗಿದ್ದರು. ಜಯಮ್ಮ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದ್ದರಿಂದ ಸಂಬಂಧಿಕರು ಹಾಗೂ ಪರಿಚಯಸ್ಥರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಮಂಗಳವಾರ ಮಧ್ಯಾಹ್ನ ರಾಮೋಹಳ್ಳಿ ಕೆರೆಯಲ್ಲಿ ಸೂಟ್ಕೇಸ್ನೊಳಗೆ ಮಹಿಳೆಯೊಬ್ಬರ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಮೃತದೇಹ ನಾಪತ್ತೆಯಾಗಿದ್ದ ಜಯಮ್ಮ ಅವರದ್ದೇ ಎಂದು ದೃಢಪಡಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಜಯಮ್ಮ ಅವರನ್ನು ಪರಿಚಯಸ್ಥರೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಹಿಂದಿರುವ ಕಾರಣ ಪತ್ತೆಹಚ್ಚಲು ಕೌಟುಂಬಿಕ, ವೈಯಕ್ತಿಕ ಹಾಗೂ ಇತರ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣವನ್ನು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.



