ಬೆಳ್ತಂಗಡಿ: ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘ (ಎಸ್‌ಡಿಎಂಸಿ/ಪಿಟಿಎ) ರಚನೆ ಹಾಗೂ ಪೋಷಕರ ಸಭೆ ಜು.13ರಂದು ನಡೆಯಿತು.

ಸಭೆಯಲ್ಲಿ ಪ್ರಮೀಳಾ ಅಧ್ಯಕ್ಷರಾಗಿ, ಯಶೋಧರ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರಾಗಿ ಮೋಹನ್, ಪುಟ್ಟಣ್ಣ, ಶೀಲಾವತಿ, ಅರುಣಾಕ್ಷಿ, ಸುರೇಶ್ ಹಾಗೂ ಶ್ವೇತ ಆಯ್ಕೆಯಾಗಿದ್ದು, ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಕಾರ್ಯದರ್ಶಿಯಾಗಿ ಹಾಗೂ ಶಿಕ್ಷಕ ಕಿರಣ್ ಜೊತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಂಚನ ವೆಂಕಟ ಸುಬ್ರಹ್ಮಣ್ಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ಮಯ್ಯ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡದೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸಿದರೆ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಶಾಲೆಯಲ್ಲಿನ ಸೌಲಭ್ಯಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶಿಕ್ಷಕಿ ಕೋಕಿಲ ಅವರು 2025–26ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಕುರ್ಕಿಲ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ರವಿಚಂದ್ರ ಜೈನ್ ಕಾರ್ಯಕ್ರಮ ಸಂಘಟಿಸಿದ್ದು, ಶಿಕ್ಷಕ ಕಿರಣ್ ಸ್ವಾಗತಿಸಿದರು. ಕೃಷ್ಣಾನಂದ ವಂದಿಸಿದರು. ಸುಮನ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು.


