Breaking
20 Jul 2026, Mon

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್‌ಸಿ. ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ಕೋರ್ಸ್‌ಗೆ ಚಾಲನೆ

ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಕಂಪ್ಯೂಟರ್ ವಿಜ್ಞಾನ ವಿಭಾಗವು ಹೊಸ ಎಂ.ಎಸ್‌ಸಿ. ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ (Cybersecurity and Artificial Intelligence) ಸ್ನಾತಕೋತ್ತರ ಕೋರ್ಸ್‌ಗೆ ಚಾಲನೆ ನೀಡಿದೆ.

ವಿಶ್ವವಿದ್ಯಾಲಯದ ಪಿಜಿ ಬಾಕ್ಸ್ ನ ಕ್ಸೇವಿಯರ್ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹೆವ್ಲೆಟ್ ಪ್ಯಾಕರ್ಡ್ ಎಂಟರ್‌ಪ್ರೈಸ್ (HPE) ಸಂಸ್ಥೆಯ ಭಾರತ, ಏಷ್ಯಾ-ಪೆಸಿಫಿಕ್ ಮತ್ತು ಜಪಾನ್ ವಿಭಾಗದ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮಾನವ ಸಂಪನ್ಮೂಲ ಮುಖ್ಯಸ್ಥ ಸೈಲೇಶ್ ಎ. ಜೆ. ಮಿನೆಜಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.

ಮಾಹಿತಿ ತಂತ್ರಜ್ಞಾನ ಶಾಲೆಯ ನಿರ್ದೇಶಕ ಫಾ. ಡೆನ್ಜಿಲ್ ಲೋಬೊ ಎಸ್.ಜೆ. ಮಾತನಾಡಿ, ಕೃತಕ ಬುದ್ಧಿಮತ್ತೆ ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಲ್ಲ ತಂತ್ರಜ್ಞಾನವಾಗಿದ್ದು, ಅದನ್ನು ನೈತಿಕತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯೊಂದಿಗೆ ಬಳಸುವುದು ಅಗತ್ಯ ಎಂದು ತಿಳಿಸಿದರು. ಕುತೂಹಲ, ನಿರಂತರ ಪ್ರಯೋಗ ಮತ್ತು ನೈತಿಕತೆ ಯಶಸ್ಸಿನ ಪ್ರಮುಖ ಆಧಾರಗಳೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮುಖ್ಯ ಅತಿಥಿ ಸೈಲೇಶ್ ಮಿನೆಜಸ್ ಅವರು, ತಂತ್ರಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಬಳಸುವ ಸಾಮರ್ಥ್ಯ, ಕಲಿಯುವ ಮನೋಭಾವ, ಕುತೂಹಲ ಮತ್ತು ಬದಲಾವಣೆಗಳಿಗೆ ಹೊಂದಿಕೊಳ್ಳುವ ಗುಣಗಳು ಇಂದಿನ ಯುವಜನತೆಗೆ ಅತ್ಯಗತ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ಶಾಲೆಯ ಡೀನ್ ಡಾ. ಎ.ಎಂ. ಬೋಜಮ್ಮ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಬಿ.ಜಿ. ಪ್ರಸಾಂತಿ, ಪಿಜಿ ಸಂಯೋಜಕಿ ಡಾ. ನಿತ್ಯಾ, ಕಾರ್ಯಕ್ರಮ ಸಂಯೋಜಕಿ ಡಾ. ಮೃಣ್ಮಯೀ ಭಟ್ಟಾಚಾರ್ಯ ಹಾಗೂ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವು ಪ್ರಾರ್ಥನಾ ಗೀತೆ ಮತ್ತು ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡು, ವಂದನಾರ್ಪಣೆಯೊಂದಿಗೆ ಸಮಾಪ್ತಿಯಾಯಿತು.

Leave a Reply

Your email address will not be published. Required fields are marked *