ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮದ ಬಿತ್ತಾಡಿಪಾದೆ ಪ್ರದೇಶದಲ್ಲಿ ಭೂಮಿ ವಿವಾದದ ಹಿನ್ನೆಲೆಯಲ್ಲಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಸಸಿಗಳನ್ನು ನಾಶಪಡಿಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಗಬೆಟ್ಟು ನಿವಾಸಿ ಶಾಂತಿ ಕುಮಾರ್ (44) ಅವರು ನೀಡಿದ ದೂರಿನ ಪ್ರಕಾರ, ಸುಮಾರು 0.25 ಎಕರೆ ಕೃಷಿ ಭೂಮಿ ವಿಚಾರವಾಗಿ ಪಕ್ಕದ ಮನೆಯ ಸೇಸಪ್ಪ ಶೇರಿಗಾರ್ ಅವರ ಕುಟುಂಬದೊಂದಿಗೆ ತಕರಾರು ಇದೆ.

ಜುಲೈ 16ರಂದು ಬೆಳಿಗ್ಗೆ ತಾವು ಕೆಲಸಕ್ಕೆ ತೆರಳಿದ್ದ ವೇಳೆ ಮನೆಯವರು ಇಲ್ಲದ ಸಮಯದಲ್ಲಿ ಆರೋಪಿಗಳು ಜಮೀನಿಗೆ ಪ್ರವೇಶಿಸಿ ಸುಮಾರು 7 ವರ್ಷ ಪ್ರಾಯದ 150 ಅಡಿಕೆ ಸಸಿಗಳನ್ನು ಕಡಿದು, ಜೆಸಿಬಿ ಮೂಲಕ ಜಮೀನನ್ನು ಸಮತಟ್ಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರಶ್ನಿಸಿದಾಗ, ಸೇಸಪ್ಪ ಶೇರಿಗಾರ್ ಅವರು “ಜಾಗ ತಮ್ಮದಾಗಿದ್ದು ಕೃಷಿ ನಾಶಪಡಿಸಿದ್ದೇವೆ” ಎಂದು ಹೇಳಿ, ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಮೀನಿಗೆ ಬರದಂತೆ ತಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯಿಂದ ಸುಮಾರು 50 ಸಾವಿರ ಮೌಲ್ಯದ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


