ಉಡುಪಿ: ಶಿರ್ವ-ಕಟಪಾಡಿ ರಾಜ್ಯ ಹೆದ್ದಾರಿಯ ಬಂಟಕಲ್ ಸಮೀಪದ ಬಿ.ಸಿ. ರಸ್ತೆ ಬಳಿ ಮಹೀಂದ್ರಾ ಥಾರ್ ಎಸ್ಯುವಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

ಗಾಯಾಳುಗಳನ್ನು ಶಿರ್ವದ ಬಾಲಕೃಷ್ಣ (21), ಇಬ್ಬರು ಯುವತಿಯರು ಸೇರಿದಂತೆ ನಾಲ್ವರು ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ವಾಹನದಲ್ಲಿದ್ದವರನ್ನು ರಕ್ಷಿಸಿ ಹೊರತೆಗೆದರು.
ಈ ವೇಳೆ ಕುಂದಾಪುರಕ್ಕೆ ತೆರಳುತ್ತಿದ್ದ ಸೋದೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜಯಶೀಲ್ ಹೆಗ್ಡೆ ಅವರು ಗಾಯಾಳುಗಳ ನೆರವಿಗೆ ಧಾವಿಸಿದರು. ಬಂಟಕಲ್ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್. ಪಾಟ್ಕರ್ ಅವರ ಸಹಕಾರದೊಂದಿಗೆ ತಮ್ಮ ಕಾರಿನಲ್ಲೇ ಇಬ್ಬರು ಗಾಯಾಳುಗಳನ್ನು ಉಡುಪಿಯ ಟಿ.ಎಂ.ಎ. ಪೈ ಆಸ್ಪತ್ರೆಗೆ ಸಾಗಿಸಿದರು.

ಉಳಿದ ಇಬ್ಬರು ಗಾಯಾಳುಗಳನ್ನು ಬಂಟಕಲ್ ನಾಗರಿಕ ಸೇವಾ ಸಮಿತಿಯ ಆಂಬುಲೆನ್ಸ್ನಲ್ಲಿ ವೀರೇಂದ್ರ ಪಾಟ್ಕರ್ ಅವರು ಆಸ್ಪತ್ರೆಗೆ ದಾಖಲಿಸಿದರು.

ಶಿರ್ವ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.



