ಬಂಟ್ವಾಳ :ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾ ಕೇಂದ್ರದ ವಿದ್ಯಾರ್ಥಿಗಳ ರಂಗಪ್ರವೇಶ, ಗುರುವಂದನಾ ಹಾಗೂ ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತುಮಧ್ಯಾಹ್ನ ಕ್ಷೇತ್ರದ ತಂತ್ರಿಗಳಾದ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿದ್ಯಾರ್ಥಿಗಳಿಂದ ರಂಗ ಪ್ರವೇಶ ನಡೆಯಿತು.ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಹಿಮ್ಮೇಳ ವಾದಕ, ಯಕ್ಷ ಗುರು ಕೆ.ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗುರುಗಳಾದ ಚಂದ್ರಶೇಖರ ಭಟ್ ಕೊಂಕಣಾಜೆ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.
ಪಿಲಾತಬೆಟ್ಟು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿಯ ಸಮೃದ್ಧ ಕಲೆಯಾದ ಯಕ್ಷಗಾನ ಇಂದು ಜಗದಗಲ ವಿಸ್ತರಿಸಿದ್ದು, ಇದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯಕ್ಷ ಶಿಕ್ಷಣ ನೀಡುತ್ತಿರುವುದು ಉತ್ತಮ ಕಾರ್ಯ. ಪೋಷಕರು ಮಕ್ಕಳನ್ನು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.
ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಮಾತನಾಡಿ,ಯಕ್ಷಗಾನ ಕಲೆಯನ್ನು ಗುರು ಮುಖೇನ ಕಲಿತು ಕರಗತ ಗೊಳಿಸಬೇಕು. ಯಕ್ಷಗಾನದಿಂದ ಪೌರಾಣಿಕ ಜ್ಞಾನ, ಭಾಷಾ ಪ್ರೌಢಿಮೆ ವೃದ್ಧಿಸುವುದು ಎಂದರು.
ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಪಾಂಗಲ್ಪಾಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಮಂಗಳೂರು ಹಾಪ್‌ಕಾಮ್ಸ್ ನಿರ್ದೇಶಕ ಕೆ.ಲಕ್ಷ್ಮೀ ನಾರಾಯಣ ಉಡುಪ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗುರು ಪ್ರೇಮ್‌ರಾಜ್ ಕೊಲ, ರಾಘವೇಂದ್ರ ಬಲ್ಲಾಳ್ ಅವರನ್ನು ಸಮ್ಮಾನಿಸಲಾಯಿತು. ಯಕ್ಷಗಾನದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಉಜ್ವಲ್ ಬಲ್ಲಾಳ್ ಕೌಡಂಬಾಡಿ,ತೇಜಸ್ ಬಲ್ಲಾಳ್ ಕೌಡಂಬಾಡಿ,ಸತ್ಯಜಿತ್ ರಾವ್ ರಾಯಿ,ರಕ್ಷಿತ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ರಾಘವೇಂದ್ರ ಬಲ್ಲಾಳ್ ಅವರು ಸ್ವಾಗತಿಸಿದರು.ಚಂದ್ರಶೇಖರ ಭಟ್ ಕೊಂಕಣಾಜೆ ಅಭಿನಂದನಾ ಭಾಷಣ ಮಾಡಿದರು. ಶಿಕ್ಷಕ ಹರಿಪ್ರಸಾದ್ ರಾವ್ ಅವರು ವಂದಿಸಿದರು.ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಅಬ್ಬರತಾಳ, ಕೊಲ ಯಕ್ಷ ಕೌಸ್ತುಭ ಮಕ್ಕಳ ತಂಡದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.




