ಬೆಳ್ತಂಗಡಿ: ಪ್ರಸಿದ್ಧ ಪ್ರವಾಸಿ ತಾಣವಾದ ಗಡಾಯಿಕಲ್ಲು ಕೋಟೆಗೆ ಚಾರಣಕ್ಕೆ ತೆರಳಿದ್ದ ಯುವಕನೊಬ್ಬನ ಕಾಲು ಟ್ವಿಸ್ಟ್ ಆಗಿ ಬೆಟ್ಟದ ಮಧ್ಯಭಾಗದಲ್ಲೇ ಸಿಲುಕಿಕೊಂಡ ಘಟನೆ ಜೂನ್ 4 ರಂದು ನಡೆದಿದೆ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಜಂಟಿ ಕಾರ್ಯಾಚರಣೆಯ ಮೂಲಕ ಯುವಕನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ತಣ್ಣೀರುಪಂಥ ಗ್ರಾಮದ ಜನತಾ ಕಾಲೋನಿ ನಿವಾಸಿ ಮೊಹಮ್ಮದ್ ಶರೀಫ್ (30) ಎಂಬವರು ಸ್ನೇಹಿತರೊಂದಿಗೆ ಗಡಾಯಿಕಲ್ಲು ಚಾರಣಕ್ಕೆ ತೆರಳಿದ್ದರು. ಕಡಿದಾದ ಬಂಡೆಯ ಮೆಟ್ಟಿಲುಗಳನ್ನು ಹತ್ತುವ ವೇಳೆ ಅವರ ಕಾಲು ಟ್ವಿಸ್ಟ್ ಆಗಿದ್ದು, ತೀವ್ರ ನೋವಿನಿಂದಾಗಿ ಕೆಳಗೆ ಇಳಿಯಲು ಸಾಧ್ಯವಾಗದೆ ಬೆಟ್ಟದ ಮಧ್ಯಭಾಗದಲ್ಲೇ ಸಿಲುಕಿಕೊಂಡಿದ್ದರು. ಅವರ ಜೊತೆಯಲ್ಲಿ ಇದ್ದವರು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ನೆರವು ಕೋರಿದ್ದಾರೆ.

ಈ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ನಿರಂತರ ಮಳೆಯಿಂದಾಗಿ ಬಂಡೆಯ ಮೆಟ್ಟಿಲುಗಳು ಜಾರುವಂತಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಆದರೂ ತಂಡಗಳು ಸುಮಾರು ಮೂರು ಗಂಟೆಗಳ ಕಾಲ ಶ್ರಮವಹಿಸಿ, ಸ್ಟ್ರೆಚರ್‌ನ ಮೂಲಕ ಗಾಯಾಳುವನ್ನು ಸುಮಾರು 1.5 ಕಿ.ಮೀ ದೂರದ 1,500ಕ್ಕೂ ಅಧಿಕ ಮೆಟ್ಟಿಲುಗಳನ್ನು ಇಳಿಸಿ ಸುರಕ್ಷಿತವಾಗಿ ಕೆಳಕ್ಕೆ ಕರೆತಂದರು.
ಬಳಿಕ ಮೊಹಮ್ಮದ್ ಶರೀಫ್ ಅವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


