ಬಂಟ್ವಾಳ, ಜೂನ್ 2: ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಕರ್ಪೆ ಶಕ್ತಿ ಕೇಂದ್ರದ ಸಭೆಯು ಮಂಗಳವಾರ ಸಂಜೆ ಕರ್ಪೆ ಸಮಾಜ ಮಂದಿರ ವಠಾರದಲ್ಲಿ ನಡೆಯಿತು. ಸಭೆಯು ಕರ್ಪೆ ಶಕ್ತಿ ಕೇಂದ್ರ ಪ್ರಮುಖ ತೇಜಸ್ ಅವರ ಅಧ್ಯಕ್ಷತೆಯಲ್ಲಿ, ಶಕ್ತಿ ಕೇಂದ್ರ ಪ್ರಭಾರಿ ಹಾಗೂ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರ ಉಪಸ್ಥಿತಿಯಲ್ಲಿ ಜರುಗಿತು.

ಸಭೆಯಲ್ಲಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ್ ಅವರು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತು ವಿವರವಾದ ಮಾಹಿತಿ ನೀಡಿದರು. ಬಿ.ಎಲ್.-2ರ ಪಾತ್ರ, ಬೂತ್ ಅಧ್ಯಕ್ಷರ ಜವಾಬ್ದಾರಿಗಳು ಹಾಗೂ ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವ ‘ಮನ್ ಕೀ ಬಾತ್’ ಕಾರ್ಯಕ್ರಮದ ವೀಕ್ಷಣೆ ಮತ್ತು ಅದರೊಂದಿಗೆ ಬೂತ್ ಸಮಿತಿ ಸಭೆಗಳನ್ನು ಆಯೋಜಿಸುವ ಕುರಿತು ಮಾರ್ಗದರ್ಶನ ನೀಡಿದರು. ಜೊತೆಗೆ ಪಕ್ಷದ ಸಂಘಟನೆ ಬಲವರ್ಧನೆಗೆ ಬೂತ್ ಅಧ್ಯಕ್ಷರು ಹಾಗೂ ಶಕ್ತಿ ಕೇಂದ್ರ ಪ್ರಮುಖರು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಪಕ್ಷದ ಪ್ರಮುಖರಾದ ಪ್ರಭಾಕರ ಪ್ರಭು ಅವರು ಸಭೆಗೆ ಸ್ವಾಗತ ಕೋರಿದ್ದು, ಶಕ್ತಿ ಕೇಂದ್ರ ಸಭೆಗಳ ಮಹತ್ವ ಹಾಗೂ ಸಂಘಟನಾ ಚಟುವಟಿಕೆಗಳ ಕುರಿತು ವಿವರಿಸಿದರು.

ಸಭೆಯಲ್ಲಿ ಕರ್ಪೆ ಬೂತ್-1 ಅಧ್ಯಕ್ಷ ಭಾಸ್ಕರ ಪ್ರಭು, ಬೂತ್-2 ಅಧ್ಯಕ್ಷ ರಾಜೇಂದ್ರ ಪೂಜಾರಿ, ಬೂತ್-2 ಕಾರ್ಯದರ್ಶಿ ಸದಾನಂದ ಪೂಜಾರಿ, ಮಂಡಲ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಪೂವಳ, ಬೂತ್ ಪದಾಧಿಕಾರಿಗಳಾದ ರಾಮಕೃಷ್ಣ ನಾಯಕ್, ದಾಮೋದರ ಪೂಜಾರಿ, ಕೃಷ್ಣಪ್ಪ ಪೂಜಾರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಸುಬ್ರಮಣ್ಯ ಭಟ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು, ಮತದಾರರ ಸಂಪರ್ಕ ವೃದ್ಧಿಸುವುದು ಹಾಗೂ ಬೂತ್ ಮಟ್ಟದ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಕುರಿತು ಚರ್ಚೆ ನಡೆಯಿತು.


