Breaking
4 Jun 2026, Thu

ವಿದ್ಯಾನಿಕೇತನ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ಪ್ರವೇಶೋತ್ಸವ ಸಂಭ್ರಮ

ಬಂಟ್ವಾಳ: ಅಣ್ಣಪ್ಪ ಬಾಳಿಗ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಬಿ. ಸುರೇಶ್ ಬಾಳಿಗ, ಕಾಶ್ಮೀರ ಪುರವಾಸಿನಿಯಾದ ವಿದ್ಯಾಮಾತೆ ಶಾರದೆಯು ವಿದ್ಯಾರ್ಥಿಗಳಿಗೆ ವಿದ್ಯೆ, ಬುದ್ಧಿ ಮತ್ತು ಜ್ಞಾನವನ್ನು ಅನುಗ್ರಹಿಸಲಿ ಎಂದು ಹಾರೈಸಿದರು. ಶಿಕ್ಷಕರು ಶಿಕ್ಷಣ ಯಜ್ಞದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.

ಸಂಸ್ಥೆಯ ಟ್ರಸ್ಟಿ ಕಿರಣ್ ಎಸ್. ಬಾಳಿಗ ಹಾಗೂ ಕೋಶಾಧಿಕಾರಿ ಸಂಜಯ್ ಬಾಳಿಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ, ಕಿಂಡರ್‌ಗಾರ್ಡನ್ ಶಿಕ್ಷಕಿ ಸವಿತಾ ಕಿರಣ್, ಗೌರವ ಶಿಕ್ಷಕರಾದ ರಾಧಾಕೃಷ್ಣ ಬಾಳಿಗ ಮತ್ತು ಜಯಾನಂದ ಪೆರಾಜೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಹಾಗೂ ಸಿಹಿ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಪ್ರವೇಶೋತ್ಸವವು ಹಬ್ಬದ ವಾತಾವರಣವನ್ನು ಸೃಷ್ಟಿಸಿತು. ಮಕ್ಕಳ ಪೋಷಕರು ಶಾಲೆಯ ವ್ಯವಸ್ಥೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸ ವಿದ್ಯಾರ್ಥಿಗಳ ಆಗಮನದೊಂದಿಗೆ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ಸಾಹಭರಿತ ಚಾಲನೆ ದೊರೆಯಿತು.

Leave a Reply

Your email address will not be published. Required fields are marked *