Breaking
5 Jun 2026, Fri

ಮೂಡುಬಿದಿರೆ: ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ-ಕಾರ್ಮಿಕ ದಾರುಣ ಸಾವು

ಮೂಡುಬಿದಿರೆ: ಕಟ್ಟಡವೊಂದಕ್ಕೆ ಶೀಟು ಅಳವಡಿಸುವ ಕಾಮಗಾರಿ ವೇಳೆ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು 17 ವರ್ಷದ ಯುವ ಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ಮೂಡುಬಿದಿರೆಯ ಕಡಪಳ್ಳ ಗಾಂಧಿನಗರದಲ್ಲಿ ನಡೆದಿದೆ.

ಮೃತರನ್ನು ಮಾರ್ಪಾಡಿ ಗ್ರಾಮದ ಪಾದೆಮನೆ ನಿವಾಸಿ ಸಂತೋಷ್ ಅವರ ಪುತ್ರ ಶೌರ್ಯ ಎಸ್. ಆಚಾರ್ಯ (17) ಎಂದು ಗುರುತಿಸಲಾಗಿದೆ. ಅವರು ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ರಜೆಯ ಅವಧಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಕಡಪಳ್ಳ ಗಾಂಧಿನಗರದಲ್ಲಿರುವ ರಾಯಲ್ ಪ್ಯಾರಡೈಸ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಶೀಟು ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಶೌರ್ಯ ಅವರನ್ನು ತಕ್ಷಣ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ತೀವ್ರ ರಕ್ತಸ್ರಾವ ಹಾಗೂ ಒಳಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಗುತ್ತಿಗೆದಾರ ಪ್ರವೀಣ್ ಹಾಗೂ ಕಟ್ಟಡದ ಮಾಲೀಕ ನೋಬರ್ಟ್ ಶಾಬಾ ರೇಗೋ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಮಗಾರಿ ವೇಳೆ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದೇ ಅವಘಡಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *