ಮಂಗಳೂರು: ಗಾಂಜಾ ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರಿನ ಪಣಂಬೂರು ಎಸಿಪಿ ತಂಡ ಹಾಗೂ ಕಾವೂರು ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು ₹1.56 ಲಕ್ಷ ಮೌಲ್ಯದ 3 ಕೆಜಿ 138 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ಉಳ್ಳಾಲ ಮುಕ್ಕಚ್ಚೇರಿಯ ಹಿಲೇರಿಯಾ ನಗರದ ನಿವಾಸಿ ಇರ್ಷಾದ್ ಯಾನೆ ಇರ್ಷಾ (26) ಎಂದು ಗುರುತಿಸಲಾಗಿದೆ.

ಮೇ 13ರಂದು ಮೇರಿಹಿಲ್ ಹ್ಯಾಲಿಪ್ಯಾಡ್ ಮೈದಾನದ ಸಮೀಪ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು. ಬಳಿಕ ತಪಾಸಣೆ ನಡೆಸಿದ ವೇಳೆ ಆತನ ಬಳಿ ಗಾಂಜಾ ಪತ್ತೆಯಾಗಿದೆ.

ಕಾರ್ಯಾಚರಣೆಯ ವೇಳೆ ಪೊಲೀಸರು ಗಾಂಜಾ ಸೇರಿದಂತೆ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್, ಸ್ಕೂಟರ್ ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಇರ್ಷಾದ್ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಶಸ್ತ್ರ ಕಾಯ್ದೆಯಡಿ ಹಾಗೂ ಮಂಗಳೂರು ಸಿ.ಎಸ್.ಪಿ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.


