Breaking
14 May 2026, Thu

ಬಂಟ್ವಾಳ–ಮೂಡಬಿದ್ರೆ ರಸ್ತೆ ಸುರಕ್ಷತೆಗೆ ಒತ್ತಾಯ: ಮರದ ರೆಂಬೆ ತೆರವು, ಚರಂಡಿ ದುರಸ್ತಿ ಮಾಡುವಂತೆ ರೋಟರಿ ಕ್ಲಬ್ ಮನವಿ

ಬಂಟ್ವಾಳ: ಬಂಟ್ವಾಳ–ಮೂಡಬಿದ್ರೆ ಲೋಕೋಪಯೋಗಿ ರಾಜ್ಯ ಹೆದ್ದಾರಿಯ ತಿರುವು ಪ್ರದೇಶಗಳಲ್ಲಿ ರಸ್ತೆಗೆ ಬಾಗಿಕೊಂಡಿರುವ ಮರದ ರೆಂಬೆಗಳು ಹಾಗೂ ಬಳ್ಳಿಗಳನ್ನು ತೆರವುಗೊಳಿಸಿ, ರಸ್ತೆ ಬದಿಯ ಚರಂಡಿಗಳನ್ನು ತಕ್ಷಣ ದುರಸ್ತಿ ಮಾಡುವಂತೆ ರೋಟರಿ ಕ್ಲಬ್ ಬಂಟ್ವಾಳ ಲೋರಟ್ಟೋ ಹಿಲ್ಸ್ ವತಿಯಿಂದ ಬಂಟ್ವಾಳ ಉಪ ವಿಭಾಗ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಹಲವು ತಿರುವು ಪ್ರದೇಶಗಳಲ್ಲಿ ಮರದ ಕೊಂಬೆಗಳು ಮತ್ತು ಬಳ್ಳಿಗಳು ರಸ್ತೆ ಮೇಲೆ ಆವರಿಸಿಕೊಂಡಿರುವುದರಿಂದ ಎದುರುಬದಿಯಿಂದ ಬರುವ ವಾಹನಗಳು ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರಿಗೆ ಅಪಾಯದ ಭೀತಿ ಎದುರಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ರಸ್ತೆ ಎರಡೂ ಬದಿಯ ಚರಂಡಿಗಳಲ್ಲಿ ಮಣ್ಣು ಹಾಗೂ ಕಸಕಡ್ಡಿಗಳು ತುಂಬಿಕೊಂಡಿರುವ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಹಿಂದಿನ ಮಳೆಗಾಲದಲ್ಲಿ ಚರಂಡಿಯಿಂದ ತೆಗೆದ ಮಣ್ಣನ್ನು ರಸ್ತೆ ಬದಿಯಲ್ಲೇ ಹಾಕಿದ್ದರಿಂದ, ಅದು ಮತ್ತೆ ಮಳೆಯ ನೀರಿನೊಂದಿಗೆ ಚರಂಡಿಗೆ ಸೇರಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ತಿಳಿಸಲಾಗಿದೆ.

ಆದ್ದರಿಂದ ಮಳೆಗಾಲ ಆರಂಭಕ್ಕೂ ಮುನ್ನವೇ ರಸ್ತೆ ತಿರುವುಗಳಲ್ಲಿರುವ ಮರದ ಕೊಂಬೆಗಳು ಮತ್ತು ಬಳ್ಳಿಗಳನ್ನು ತೆರವುಗೊಳಿಸಿ, ಚರಂಡಿ ದುರಸ್ತಿ ಕಾಮಗಾರಿಯನ್ನು ಕೈಗೊಂಡು ವಾಹನ ಸವಾರರಿಗೆ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಜರುಗಿಸಬೇಕು ಎಂದು ರೋಟರಿ ಕ್ಲಬ್ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಲೋರಟ್ಟೋ ಹಿಲ್ಸ್ ಅಧ್ಯಕ್ಷ ರೋ. ವಿಜಯ್ ಫೆರ್ನಾಂಡಿಸ್, ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ರಾಮಚಂದ್ರ ಶೆಟ್ಟಿಗಾರ್, ಆಂಟನಿ ಸ್ವೀಕ್ವೆರಾ, ಐವನ್ ಮೆನೇಜಸ್, ಪ್ರೀತಮ್ ರೋಡ್ರಿಗಸ್, ರುಡಾಲ್ಫ್ ದೇವಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *