Breaking
14 May 2026, Thu

ಸಂಸ್ಕಾರಯುತ ಶಿಕ್ಷಣದಿಂದ ವಿದ್ಯಾರ್ಥಿ ಶ್ರೇಷ್ಠನಾಗಲು ಸಾಧ್ಯ: ಭವಾನಿ ಶಂಕರ್ ಭಟ್

ಬಂಟ್ವಾಳ: ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ವಿನಯತೆ ಮತ್ತು ಶಿಸ್ತನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದು ಖ್ಯಾತ ಜ್ಯೋತಿಷ್ಯರಾದ ಭವಾನಿ ಶಂಕರ್ ಭಟ್ ಅಭಿಪ್ರಾಯಪಟ್ಟರು.

ಅವರು ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕಿನ್ನಾಜೆ ಗಣಪತಿ ದೇವಸ್ಥಾನದ ವಠಾರದಲ್ಲಿ ಶ್ರೀ ಮಹಾ ಗಣಪತಿ ಸೇವಾ ವೃಂದದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಾಯತ್ರಿ ಶಿವರಾಯ ಪ್ರಭು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದಿನ ಕೆಲಸಗಳನ್ನು ತಾವೇ ಮಾಡಿಕೊಂಡು ಶಿಕ್ಷಣ ಪಡೆಯುವುದರೊಂದಿಗೆ ಹಿರಿಯರೊಂದಿಗೆ ಗೌರವದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ. ರಮೇಶ್ ನಾಯಕ್ ರಾಯಿ ಮಾತನಾಡಿ, ವಿದ್ಯಾರ್ಥಿಗಳು ಪರಸ್ಪರ ಅನುಕರಣೆಯ ಒತ್ತಡಕ್ಕೆ ಒಳಗಾಗದೇ ಜನಪಯೋಗಿ ಹಾಗೂ ಸಮಾಜಮುಖಿ ಶಿಕ್ಷಣದ ಆಯ್ಕೆಗಳತ್ತ ಚಿಂತನೆ ನಡೆಸಬೇಕು ಎಂದರು. ಜೊತೆಗೆ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗುವ ನಿಟ್ಟಿನಲ್ಲಿ ಆಡಳಿತಾತ್ಮಕ ಹುದ್ದೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನೂ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗಣೇಶ್ ಪ್ರಭು ಪಂಜಿಕಲ್ಲು, ದಯಾನಂದ ಭಟ್ ಬಾಳ್ತಿಲ, ನಿವೃತ್ತ ಶಿಕ್ಷಕರಾದ ಕೆ. ನಾರಾಯಣ ನಾಯಕ್, ಪ್ರಭಾಕರ ಪ್ರಭು ಸೇರಿದಂತೆ ದಾಮೋದರ ನಾಯಕ್, ಶಶಿಧರ ಶೆಣೈ, ಗೋಪಾಲಕೃಷ್ಣ ಪ್ರಭು, ಚಂದ್ರಶೇಖರ ಪ್ರಭು ಹೆಣ್ಣುರು, ರವೀಂದ್ರ ನಾಯಕ್ ಬೋಳಂಗಡಿ, ರಾಮರಾಯ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಸೇವಾ ವೃಂದದ ಅಧ್ಯಕ್ಷ ಸುಧಾಕರ ಪ್ರಭು ಸ್ವಾಗತಿಸಿದರು. ಶಿಕ್ಷಕ ಕೆ. ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ಕೆ. ರಾಮಕೃಷ್ಣ ನಾಯಕ್ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *