ಬಂಟ್ವಾಳ: ಎನ್.ಎಸ್. ಬೋಸರಾಜು ಅವರು ಬಿ. ರಮಾನಾಥ ರೈ ಅವರ ಬಂಟ್ವಾಳ ತಾಲೂಕಿನ ಕಳ್ಳಿಗೆ ಸ್ವಗೃಹಕ್ಕೆ ಭೇಟಿ ನೀಡಿ ರಾಜಕೀಯ ಹಾಗೂ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದರು.

ಸುಮಾರು ಒಂದು ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಬೋಸರಾಜು, ಪಕ್ಷದ ಬಲವರ್ಧನೆಗಾಗಿ ರಮಾನಾಥ ರೈ ಅವರು ಕೈಗೊಂಡ ಹೋರಾಟಗಳು ಮತ್ತು ಸಂಘಟನಾ ಕಾರ್ಯಗಳು ಯಶಸ್ಸು ತಂದಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಶ್ಚಿಮ ವಾಹಿನಿ ಯೋಜನೆ ಕುರಿತಂತೆ ಸಚಿವರೊಂದಿಗೆ ಚರ್ಚೆ ನಡೆಸಿದ ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಇನ್ನಷ್ಟು ಅನುದಾನವನ್ನು ಒದಗಿಸುವಂತೆ ಮನವಿ ಮಾಡಿದರು.

ಅದರ ಜೊತೆಗೆ ಸಜೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಗ್ರಾಮ ಕುಡಿಯುವ ನೀರು ಹಾಗೂ ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಅಗತ್ಯವಿದೆ ಎಂದು ತಿಳಿಸಿ, ವಿಶೇಷ ಮುತುವರ್ಜಿಯಿಂದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ ಸಭಾಭವನ ನಿರ್ಮಾಣಕ್ಕೆ ತಾಂತ್ರಿಕ ಮಾರ್ಗದರ್ಶನ
ಸಜೀಪ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ ದೇವಾಲಯದ ಉತ್ತರ ಭಾಗದಲ್ಲಿ ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ವಾಸ್ತು ಬದ್ಧವಾಗಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸಭಾಭವನದ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ತಾಂತ್ರಿಕ ವಿನ್ಯಾಸ ಹಾಗೂ ಮಾರ್ಗದರ್ಶನ ನೀಡಲು ಯುವ ಇಂಜಿನಿಯರ್ ರಕ್ಷಿತ್ ಶೆಟ್ಟಿ ದೇವಾಲಯಕ್ಕೆ ಭೇಟಿ ನೀಡಿದರು.

ದೇವಾಲಯದಲ್ಲಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದ ಅವರು, ಸಭಾಭವನ ನಿರ್ಮಾಣದ ಕುರಿತು ಸೂಕ್ತ ಸಲಹೆ ಹಾಗೂ ತಾಂತ್ರಿಕ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯ ಶಂಕರ ಬಾಸ್ರಿ ತಾಯ, ಉದ್ಯಮಿ ಅಚಲ್ ಕೃಷ್ಣ ಭಟ್, ಗುತ್ತಿಗೆದಾರ ಎಂ. ಮಹಾಬಲ ಕೊಟ್ಟಾರಿ, ಅರ್ಚಕ ಕೃಷ್ಣ ಭಟ್ಟ, ಕೆ. ಸೀತಾರಾಮ ಶೆಟ್ಟಿ, ಎ. ಹರಿಪ್ರಸಾದ ಭಂಡಾರಿ, ಧನಂಜಯ ಶೆಟ್ಟಿ ಪರಾರಿ ಗುತ್ತು ಹಾಗೂ ರವಿರಾಜ್ ಶೆಟ್ಟಿ.ಪಿ ಉಪಸ್ಥಿತರಿದ್ದರು.


