Breaking
9 Apr 2026, Thu

ಮೂಡುಪಡುಕೋಡಿ ಸ.ಹಿ.ಪ್ರಾ.ಶಾಲೆ: ಬೇಸಿಗೆ ಕಲಾ ಶಿಬಿರಕ್ಕೆ ಚಾಲನೆ

ಬಂಟ್ವಾಳ: ತಾಲೂಕಿನ ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್ ಮತ್ತು ಜೆ ಸಿ ಐ ಬಂಟ್ವಾಳ ಸಹಯೋಗದಲ್ಲಿ ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಬೇಸಿಗೆಯ “ಕಲಾ ಮತ್ತು ಶೂನ್ಯ ತ್ಯಾಜ್ಯ ಮಾಹಿತಿ ಶಿಬಿರ”ಕ್ಕೆ ಮೂಡುಪಡುಕೋಡಿ ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ಏ. 08 ರಂದು ಚಾಲನೆ‌ ನೀಡಲಾಯಿತು.

ವಾಮದಪದವು ಸ. ಪ. ಪೂ. ಕಾಲೇಜಿನ‌ ಚಿತ್ರಕಲಾ ಶಿಕ್ಷಕರಾದ ಮುರಳೀಕೃಷ್ಣ ಅವರು ಶಿಬಿರವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್ ಸ್ಥಳೀಯವಾಗಿ ಸಮಾಜಮುಖಿ ಚಟುವಟಿಕೆಯಿಂದ ಗುರುತಿಸಿಕೊಂಡಿದ್ದು, ಬೇಸಿಗೆ ಶಿಬಿರವನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು‌ ಅನಾವರಣಗೊಳಿಸಲು ಅವಕಾಶವನ್ನು ಒದಗಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ರಂಗಭೂಮಿ ಕಲಾವಿದ ರತ್ನ ದೇವ್ ಪುಂಜಾಲಕಟ್ಟೆ ಮಾತನಾಡಿ, ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳು ಕೂಡ ಕಲಾವಿದರೇ ಅಗಿದ್ದಾರೆ. ಇಂತಹ ಶಿಬಿರದಲ್ಲಿ ದೊರಕುವ ತರಬೇತಿಯನ್ನು ಆಸಕ್ತಿಯಿಂದ ಬಳಸಿಕೊಳ್ಳಬೇಕು ಎಂದರು.

ಬಂಟ್ವಾಳ ಜೆ‌.ಸಿ.ಐ.ಅಧ್ಯಕ್ಷ ಕಿಶೋರ್ ಆಚಾರ್ಯ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಇಂತಹ ಉಪಯುಕ್ತ ಕಾರ್ಯಕ್ರಮಗಳಿಗೆ ಜೆಸಿಐಯು ಸದಾ ಸಹಯೋಗವನ್ನು ನೀಡುತ್ತಾ ಬರುತ್ತಿದೆ. ಮಕ್ಕಳ ಬೆಳವಣಿಗೆಗೆ ಪೂರಕವಾದ ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯವಾಗಿದೆ. ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದರು.

ಪತ್ರಕರ್ತ ವೆಂಕಟೇಶ್ ಬಂಟ್ವಾಳ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶಾಲಿನಿ ಯತೀಶ್ ಪೂಜಾರಿ, ಇರ್ವತ್ತೂರು ಶಾರದಾ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಾದ ಸುಧೀಂದ್ರ ಶೆಟ್ಟಿ, ಪ್ರಶಾಂತ್ ಜೈನ್, ದಯಾನಂದ ಎರ್ಮೆನಾಡು, ಅವರು ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕಿ ಸಂಧ್ಯಾ ಅಳಕೆ, ಕಲಾವಿದರಾದ ವಿದ್ಯಾನಂದ, ಶೈಲೇಶ್, ಯಕ್ಷ, ಸತ್ಯಶ್ರೀ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಸುನಿಲ್ ಸಿಕ್ವೆರಾ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *