Breaking
22 Sep 2026, Tue

ಎಸಿ ಅಳವಡಿಸುವಾಗ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದು ಯುವಕ ಸಾವು

ಮಂಗಳೂರು: ಎಸಿ ಅಳವಡಿಸುತ್ತಿದ್ದಾಗ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ತಲಪಾಡಿ ನಿವಾಸಿಗಳಾದ ವಿಶ್ವನಾಥ್ ಮತ್ತು ಮೀನಾಕ್ಷಿ ದಂಪತಿಯ ಪುತ್ರ ಹರ್ಷಿತ್ ಪೂಜಾರಿ (32 ವ) ಎಂದು ಗುರುತಿಸಲಾಗಿದೆ.

ಕಳೆದ ಮೂರು ವರ್ಷಗಳಿಂದ ಹರ್ಷಿತ್ ಅವರು ವಿದೇಶದಲ್ಲಿ ಹಡಗು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ಮೂರು ತಿಂಗಳಿಗೊಮ್ಮೆ ರಜೆಯ ಮೇಲೆ ಮನೆಗೆ ಬರುತ್ತಿದ್ದ ಇವರು ಬಿಡುವಿನ ಸಮಯದಲ್ಲಿ ತಮ್ಮ ಮೂಲ ವೃತ್ತಿಯಾದ ಎಸಿ ಮೆಕ್ಯಾನಿಕ್ ಕೆಲಸವನ್ನೂ ಮಾಡುತ್ತಿದ್ದರು. ಇತ್ತೀಚೆಗೆ ಸಂಬಂಧಿಕರೊಬ್ಬರಿಗೆ ಎಸಿ ಮೆಕ್ಯಾನಿಸಂ ತರಬೇತಿ ನೀಡಲು ಅವರು ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನ ಬಹುಮಹಡಿ ಕಟ್ಟಡವೊಂದರಲ್ಲಿ ಎಸಿ ಯುನಿಟ್ ಅಳವಡಿಸುತ್ತಿದ್ದಾಗ, ಹರ್ಷಿತ್ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಮೃತರು ಪೋಷಕರು, ಪತ್ನಿ, ಸಹೋದರ ಮತ್ತು ಎರಡು ವರ್ಷದ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *