ಮಂಗಳೂರು: ಕೊಣಾಜೆ ಯುವಕನೊಬ್ಬ ನಾಪತ್ತೆಯಾದ ಘಟನೆ ಮಾ. 9 ರಂದು ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಕೊಣಾಜೆ ಗ್ರಾಮದ ಮುಚ್ಚಿಲಕೋಡಿ ಮನೆ ನಿವಾಸಿ ದಿನೇಶ್ ಶೆಟ್ಟಿಗಾರ್ ಅವರ ಪುತ್ರ ವಿವೇಕ್ ಶೆಟ್ಟಿಗಾರ್( 32ವ) ಎಂದು ಗುರುತಿಸಲಾಗಿದೆ.

ಮಂಗಳೂರಿನ ಕದ್ರಿ ಬಳಿಯ ವೇದ ಮೋಟಾರ್ಸ್‌ನಲ್ಲಿ ಉದ್ಯೋಗದಲ್ಲಿದ್ದ ವಿವೇಕ್ ಅವರು ಎಂದಿನಂತೆ ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿದ್ದರು. ಆ ರಾತ್ರಿ ಸುಮಾರು 9:30ರ ವೇಳೆ ಅವರು ತಮ್ಮ ತಾಯಿಗೆ ಕರೆ ಮಾಡಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದಾಗಿ ಹಾಗೂ ಮನೆಗೆ ಮರಳಲು ತಡವಾಗಲಿದೆ ಎಂದು ತಿಳಿಸಿದ್ದಾರೆ.

ಆದರೆ ಮಧ್ಯರಾತ್ರಿಯಾದರೂ ವಿವೇಕ್ ಮನೆಗೆ ಹಿಂತಿರುಗದ ಕಾರಣ ಕುಟುಂಬದವರು ಅವರ ಮೊಬೈಲ್ ಫೋನ್‌ಗೆ ಕರೆ ಮಾಡಲು ಪ್ರಯತ್ನಿಸಿದರೂ ಉತ್ತರಿಸಿಲ್ಲ.
ನಂತರ ಅವರ ಕೆಲಸದ ಸ್ಥಳವನ್ನು ಸಂಪರ್ಕಿಸಿದಾಗ, ಕಂಪನಿ ಮುಚ್ಚಲ್ಪಟ್ಟಿರುವುದಾಗಿ ಕುಟುಂಬದವರಿಗೆ ತಿಳಿದುಬಂದಿದೆ.

ಈ ಕುರಿತು ಅವರ ತಂದೆ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕಾಣೆಯಾದ ವಿವೇಕ್ ಶೆಟ್ಟಿಗಾರ್ ಅವರು ಸುಮಾರು 5 ಅಡಿ 7 ಇಂಚು ಎತ್ತರ, ಸದೃಢ ಶರೀರ, ದುಂಡು ಮುಖ, ಎಣ್ಣೆಗಂಪು ಮೈಬಣ್ಣ ಹೊಂದಿದ್ದು ಗಡ್ಡವಿದೆ. ಕಾಣೆಯಾದ ದಿನ ನೀಲಿ ಬಣ್ಣದ ಜೀನ್ಸ್ ಹಾಗೂ ಬಿಳಿ ಚುಕ್ಕೆಗಳಿರುವ ಉದ್ದ ತೋಳಿನ ಶರ್ಟ್ ಧರಿಸಿದ್ದರು. ಅವರು ತುಳು ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ.

ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ನಗರ ನಿಯಂತ್ರಣ ಕೊಠಡಿ (0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (0824-2220536 / 9480802350) ಅನ್ನು ಸಂಪರ್ಕಿಸಲು ಕೋರಲಾಗಿದೆ.




