ಬಂಟ್ವಾಳ :ತಾಲೂಕು ಸಿದ್ಧಕಟ್ಟೆ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ಹೋಳಿ ಹಬ್ಬದ ವರ್ಷಾವಧಿ ಮಹೋತ್ಸವ ವಿಶಿಷ್ಠವಾಗಿ ಮೇಳೈಸುವುದರೊಂದಿಗೆ ಮಾ. 4 ರಂದು ಸಂಪನ್ನಗೊಂಡಿತು.

ಗುರಿಕಾರರಾದ ಓಬಯ ಗೌಡ ರಾಯಭಾರಿ ಅವರು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಕುಡುಬಿ ಸಮುದಾಯದವರು ಸಂಪ್ರದಾಯ ಪ್ರಕಾರ ಬೆಳಗ್ಗೆಯಿಂದ ಸಂಜೆವರೆಗೆ ದೇವಸ್ಥಾನದಲ್ಲಿ ಕುಡುಬಿಗಳ ವಿಶಿಷ್ಠ ಮರಾಠಿ ಭಾಷೆಯಲ್ಲಿ ರಾಮಾಯಣ, ಮಹಾಭಾರತ ಹಾಗೂ ಪುರಾಣ ಕಥೆಗಳನ್ನು ಹಾಡುತ್ತಾ ನೃತ್ಯ ಮಾಡಿದರು.


ತಲೆಗೆ ರುಮಾಲು, ಅಬ್ಬಲ್ಲಿಗೆ ಹೂವಿನ ಮಾಲೆ, ಮಲ್ಲಿಗೆ ಹಾಕಿಕೊಂಡು ಮಣ್ಣಿನಿಂದ ತಯಾರಿಸಿದ ವಿಶೇಷ ವಾದ್ಯ ಗುಮ್ಮಟೆಯನ್ನು ಬಡಿಯುತ್ತಾ ನೃತ್ಯ ಪ್ರದರ್ಶಿಸಿದರು. ರಾಮ-ಸೀತೆ, ಹುಲಿ, ಕರಡಿ, ಸಿಂಹ, ಹಂದಿ ಭೇಟೆ ವೇಷಗಳ ನೃತ್ಯ ಪ್ರದರ್ಶನ, ವಿವಿಧ ತಂಡದವರ ಗುಮ್ಮಟೆ ಮತ್ತು ಕೋಲಾಟ ಪ್ರದರ್ಶನ ನಡೆಯಿತು. ಇದರಲ್ಲಿ ಶ್ರೀ ರಾಮ ಸೀತಾ ಸ್ವಯಂವರ ಹಾಗೂ ಕೋಲಾಟದಲ್ಲಿ ಸೇತುವೆ ಕಟ್ಟುವುದು ವಿಶಿಷ್ಠವಾಗಿತ್ತು. ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಗುರಿಕಾರರಾದ ಗೊಪಾಲ ಗೌಡ ಸಿದ್ದಕಟ್ಟೆ ಪ್ರಾ.ಕೃ. ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ನಿರ್ದೇಶಕರಾದ ಎ.ಶಿವ ಗೌಡ, ಚಂದ್ರಶೇಖರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ, ಪ್ರಮುಖರಾದ ಹೇಮಚಂದ್ರ ಗೌಡ, ಕರುಣಾಕರ, ಮೋಹನ ಗೌಡ, ನಾರಾಯಣ ಗೌಡ, ದೇವಪ್ಪ ಕಣಿಯೂರು, ಜಾನಪ್ಪ, ಗಂಗಾಧರ ಗೌಡ, ಡಾಕಯ್ಯ ಗೌಡ, ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





