ಬೆಳ್ತಂಗಡಿ: ತಾಲೂಕಿನ ದಿಡುಪೆಯ ಸಮೀಪದ ಮಲವಂತಿಗೆ ಗ್ರಾಮದ ಕೊಂಡಾಲು ಎಂಬ ಮನೆಯೊಂದರ ಅಂಗಳದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಮನೆಗೆ ಆಳವಡಿಸಲಾದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ಕೊಂಡಾಲು ಮನೆಯ ನಿವಾಸಿ ಆಗಿರುವ ಜಯಂತ್ ಅವರ ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯ ಬೇಟೆಗಾಗಿ ಚಿರತೆ ಶುಕ್ರವಾರ ರಾತ್ರಿ ಸುಮಾರು 10.30 ರ ವೇಳೆಗೆ ಬಂದಿದ್ದು ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ಮತ್ತು ತೆಗೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಕಂಡು ಬಂದಿದೆ.

ಇತ್ತ ಈ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಆಸುಪಾಸಿನಲ್ಲಿ ಚಿರತೆ ಓಡಾಟದ ಮಾಹಿತಿ ಇತ್ತು ಎನ್ನಲಾಗಿದೆ. ಈ ದೃಶ್ಯ ವೈರಲ್ ಆದ ನಂತರ ಗ್ರಾಮಸ್ಥರು ಭಯಭೀತರಾಗಿದ್ದು ಕೂಡಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿದು ನೆಮ್ಮದಿಯ ವಾತಾವರಣ ಕಲ್ಪಿಸುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.









