ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಕಾಂಪ್ರಬೈಲು ಎಂಬಲ್ಲಿ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾದ ಘಟನೆ ನಡೆದಿದೆ.

ಫೆ. 4 ರಂದು ಮನೆಯವರು ಕಶೇಕೋಡಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಜಾತ್ರೋತ್ಸವಕ್ಕೆ ತೆರಳಿದ್ದರು. ಈ ಅವಕಾಶಗಳನ್ನು ಬಳಸಿಕೊಂಡು ಕಳ್ಳರು ಮನೆಯ ಹಿಂಬದಿಯ ಬಾಗಿಲನ್ನು ಒಡೆದು ಒಳನುಗ್ಗಿದ್ದಾರೆ.

ಜಾತ್ರೆ ಮುಗಿಸಿ ಮನೆಯವರು ಬಂದು ನೋಡಿದಾಗ ಮನೆಯ ಕೋಣೆಯಲ್ಲಿದ್ದ ಕಪಾಟನ್ನು ಯಾವುದೋ ಸಾಧನದಿಂದ ಒಡೆದಿರುವುದು ಹಾಗೂ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.

ಕಳ್ಳರು ಸುಮಾರು 5 ಪವನ್ ತೂಕದ ಒಂದು ಹವಳದ ಮಾಲೆ, ಎರಡೂವರೆ ಪವನ್ ತೂಕದ ಒಂದು ಮುತ್ತಿನ ಸರ, ಒಂದೂವರೆ ಪವನ್ ತೂಕದ ಬೆಂಡೋಲೆ, ಜುಮುಕಿ, 5000 ರೂ ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







