ಮಂಗಳೂರು: ನಂತೂರ್‌ನಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಸಂಚಾರಿ ಪೊಲೀಸ್ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಕರೆದುಕೊಂಡು ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಸಂಚಾರಿ ಪೊಲೀಸ್ ಅಧಿಕಾರಿಗಳು ಮಾತನಾಡಿ, ನಂತೂರ್‌ನಲ್ಲಿ ಸಮರ್ಪಕ ದಾರಿದೀಪಗಳ ಕೊರತೆ, ಜಿಬ್ರಾ ಕ್ರಾಸ್ ಇಲ್ಲದಿರುವುದು, ರಸ್ತೆ ಸುರಕ್ಷಾ ಸೂಚನಾ ಫಲಕಗಳ ಅಭಾವ ಸೇರಿದಂತೆ ಹಲವು ಸಮಸ್ಯೆಗಳಿವೆ ಎಂದು ಗಮನಕ್ಕೆ ತಂದರು. ಅಲ್ಲದೆ, ರಸ್ತೆ ಅಗಲಗೊಳಿಸುವ ಸಂಬಂಧ ತಡೆಗೋಡೆ ಕಾಮಗಾರಿ ಅರ್ಧದಲ್ಲೇ ನಿಂತಿದೆ, ಬಸ್ಸುಗಳು ನಿಗದಿತ ಸ್ಥಳದಲ್ಲಿ ನಿಲ್ಲಿಸುವುದಿಲ್ಲ ತಂಗುದಾಣಗಳಲ್ಲಿ ಅಸ್ತವ್ಯಸ್ತವಾಗಿ ನಿಲ್ಲಿಸುತ್ತಾರೆ, ನಂತೂರ್ ವೃತ್ತದಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲದೆ ಇರುವುದರಿಂದ ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದ್ದು, ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಸೇರಿದ ಕಾರಣ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡರೆ ಸಂಚಾರಿ ನಿಯಂತ್ರಣವನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರು, ಈ ಕುರಿತು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗುವುದು ಹಾಗೂ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಲು ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ನಜ್ಮಶರೀಪ್, ಜಿ.ಕೆ. ಭಟ್, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ಸ್ಥಳೀಯರಾದ ಸ್ಟ್ಯಾನ್ಲಿ ಬಂಟ್ವಾಳ್, ಜೇಮ್ಸ್ ಪ್ರವೀಣ್, ಕೇಶವ್ ಮರೋಲಿ, ಅಶೋಕ್ ಡಿ.ಕೆ., ನೌಸ್ಯಾದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.







