ಮಂಗಳೂರು: ದೇಶದಲ್ಲಿ ಶೋಷಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಧ್ವನಿಯಾಗಿ ನಿರಂತರ ಹೋರಾಟ ನಡೆಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷವು ಫೆ. 10 ರಿಂದ ಮಾ. 10 ರವರೆಗೆ ಎಸ್‌ಡಿಪಿಐ ಸೇರೋಣ ಜನ ಸಾಮಾನ್ಯರ ಧ್ವನಿಗೆ ಶಕ್ತಿ ನೀಡೋಣ ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2009ರಲ್ಲಿ ಪಕ್ಷ ಸ್ಥಾಪನೆಯಾದ ದಿನದಿಂದಲೂ ಎಸ್‌ಡಿಪಿಐ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡದೆ, ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ, ಫ್ಯಾಶಿಸಂ ವಿರುದ್ಧವಾಗಿ ರಾಜಿಯಿಲ್ಲದ ಹೋರಾಟ ನಡೆಸುತ್ತಾ ಬಂದಿದೆ. ಹಸಿವು ಮುಕ್ತ ಮತ್ತು ಭಯ ಮುಕ್ತ ಸಮಾಜದ ನಿರ್ಮಾಣವೇ ಪಕ್ಷದ ಮುಖ್ಯ ಗುರಿಯಾಗಿದ್ದು, ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಜನಸಾಮಾನ್ಯರನ್ನು ಸಂಘಟಿಸುವಲ್ಲಿ ಪಕ್ಷವು ಮುಂಚೂಣಿಯಲ್ಲಿದೆ.

ಸಂವಿಧಾನ ಪ್ರೇಮಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿರುವ ನವಾಝ್ ಕಟ್ಟೆ ಅವರು, “ವ್ಯವಸ್ಥೆಯ ಬದಲಾವಣೆಗಾಗಿ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಇಂದಿನ ಕಾಲಘಟ್ಟದಲ್ಲಿ ಸಂಘಟಿತ ಶಕ್ತಿ ಅನಿವಾರ್ಯವಾಗಿದೆ. ಆದ್ದರಿಂದ ಸಂವಿಧಾನ ಪ್ರಿಯ ನಾಗರಿಕರು, ವಿಶೇಷವಾಗಿ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಡಿಪಿಐ ಸದಸ್ಯತ್ವ ಪಡೆಯುವ ಮೂಲಕ ಜನಪರ ಹೋರಾಟಕ್ಕೆ ಬಲ ತುಂಬಬೇಕು” ಎಂದು ಕೋರಿದ್ದಾರೆ.

ಫೆ. 10 ರಂದು ಜಿಲ್ಲೆಯಾಧ್ಯಂತ ಆರಂಭಗೊಳ್ಳಲಿರುವ ಸದಸ್ಯತ್ವ ಅಭಿಯಾನದಲ್ಲಿ ನಮ್ಮ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಹೊಸ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ







