ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕೆರಿಬಿಯನ್ ರಾಷ್ಟ್ರಗಳ ಭೇಟಿಗೂ ಮುಂಚಿತವಾಗಿ, ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದೇಶಕ್ಕೆ ಅವರು ನೀಡಿದ ಅಪಾರ ಕೊಡುಗೆಗಾಗಿ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಡೊಮಿನಿಕಾ ಗೌರವವನ್ನು ಘೋಷಿಸಿದೆ.
“ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಡೊಮಿನಿಕಾಕ್ಕೆ ಅವರು ನೀಡಿದ ಕೊಡುಗೆಗಳನ್ನು ಮತ್ತು ಭಾರತದ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಅವರ ಸಮರ್ಪಣೆಯನ್ನು ಗುರುತಿಸಿ ಕಾಮನ್‌ವೆಲ್ತ್ ಆಫ್ ಡೊಮಿನಿಕಾ ತನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನೀಡಲಿದೆ” ಎಂದು ಇಂದು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಡೊಮಿನಿಕಾದ ಪ್ರಧಾನ ಮಂತ್ರಿ ಕಚೇರಿಯು ಈ ಘೋಷಣೆಯನ್ನು ಮಾಡಿದ್ದು, ಕಾಮನ್‌ವೆಲ್ತ್ ಆಫ್ ಡೊಮಿನಿಕಾದ ಅಧ್ಯಕ್ಷರಾದ ಸಿಲ್ವಾನಿ ಬರ್ಟನ್ ಭಾರತ-ಕ್ಯಾರಿಕಾಮ್ ಶೃಂಗಸಭೆ 2024ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗಯಾನಾದ ಜಾರ್ಜ್‌ಟೌನ್‌ನಲ್ಲಿ ನವೆಂಬರ್ 19-21ರಿಂದ ಶೃಂಗಸಭೆ ನಡೆಯಲಿದೆ. ಮುಂಬರುವ ಭಾರತ-ಕ್ಯಾರಿಕಾಮ್ ಶೃಂಗಸಭೆಯಲ್ಲಿ ಡೊಮಿನಿಕನ್ ಅಧ್ಯಕ್ಷರು ಪ್ರಶಸ್ತಿಯನ್ನು ನೀಡಲಿದ್ದಾರೆ. ಫೆಬ್ರವರಿ 2021ರಲ್ಲಿ ಭಾರತವು ಡೊಮಿನಿಕಾಗೆ 70,000 ಡೋಸ್ ಅಸ್ಟ್ರಾಜೆನೆಕಾ COVID-19 ಲಸಿಕೆಯನ್ನು ಪೂರೈಕೆ ಮಾಡಿತ್ತು. ಇದು ಡೊಮಿನಿಕಾ ತನ್ನ ಕ್ಯಾರಿಬಿಯನ್ ನೆರೆಹೊರೆಯವರಿಗೆ ಬೆಂಬಲವನ್ನು ವಿಸ್ತರಿಸಲು ಅನುವು ಮಾಡಿಕೊಟ್ಟ ಕೊಡುಗೆಯಾಗಿದೆ.