ಬೆಳ್ತಂಗಡಿ: ಒಂದು ವಾರದ ಒಳಗೆ ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡದೇ ಇದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡಿಕೆ ಕೃಷಿಗೆ ಬಂದಿರುವ ಎಲೆ ಚುಕ್ಕಿ ರೋಗ, ಅತೀವ ಗಾಳಿ, ಮಳೆ, ಕೊಳೆ ರೋಗ, ಬೆಂಕಿ ರೋಗ, ಪ್ರಕೃತಿ ವಿಕೋಪದಿಂದ ಇಳುವರಿ ಕಮ್ಮಿಯಾಗಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಾಳುಮೆಣಸು ಸಮಸ್ಯೆ ಕೂಡ ಹೇಳತೀರದು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಕ್ಕಡ ಹೋಬಳಿಯ ರೈತರಿಗೆ ಇನ್ನೂ ಬೆಳೆ ವಿಮೆ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ. ಬಂದ ಬೆಳೆ ವಿಮೆ ತುಂಬಾ ಕಡಿಮೆ ಜಮಾ ಆಗಿದ್ದು , ನಮ್ಮ ಸಂಘದ ವ್ಯಾಪ್ತಿಯ ಗ್ರಾಮಗಳಿಗೆ ತಾರತಮ್ಯ ಮಾಡಲಾಗಿದೆ. ಹೀಗಾಗಿ ಆದಷ್ಟು ಬೇಗ ಈ ಗೊಂದಲ ನಿವಾರಿಸಿ ವಾರದ ಒಳಗೆ ರೈತರ ಖಾತೆಗೆ ಬೆಳೆ ವಿಮೆ ಜಮೆ ಮಾಡಬೇಕು. ತಪ್ಪಿದ್ದಲ್ಲಿ ವಿಮಾ ಕಂಪನಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಇದರ ಬಗ್ಗೆ ಈಗಾಗಲೇ ಹೈಕೋರ್ಟ್ ವಕೀಲರ ಜೊತೆ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ.



