Breaking
23 Mar 2026, Mon

ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿದ ಮೂವರು ಆರೋಪಿಗಳ ಬಂಧನ

ಮಂಗಳೂರು: ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿದ ಮೂವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್, ವಿನೋದ್ ಅಲಿಯಾಸ್ ಕೋತಿ ಹಾಗೂ ಗಿರೀಶ್ ಅಲಿಯಾಸ್ ಸೈಕಲ್ ಗಿರಿ ಎಂದು ಗುರುತಿಸಲಾಗಿದೆ.

ಡಿ. 3 ರಂದು ಸುರತ್ಕಲ್ ಸಮೀಪದ ಮುಕ್ಕ ಪ್ರದೇಶದಲ್ಲಿ ವಾಸವಿರುವ ವೃದ್ಧೆ ಜಲಜ ( 85 ವ) ಅವರ ಮನೆಗೆ ಅಪರಿಚಿತರು ಕುಡಿಯಲು ನೀರು ಬೇಕೆಂದು ಬಾಗಿಲು ತೆರೆಯುವಂತೆ ಹೇಳಿದ್ದು, ವೃದ್ಧೆ ಬಾಗಿಲು ತೆಗೆಯದ ಕಾರಣ ಮನೆಯ ಹಂಚು ತೆಗೆದು ಒಳಪ್ರವೇಶಿಸಿ ಜೋರಾಗಿ ಬೆದರಿಸಿ, ವೃದ್ಧೆಯ ಕುತ್ತಿಗೆಗೆ ಬೈರಾಸು ಬಿಗಿದು, ಬಳಿಕ ಗೋಡ್ರೇಜ್ನಲ್ಲಿದ್ದ ಸುಮಾರು 16 ಗ್ರಾಂ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆ, ಹಾಗೂ 14 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ತನಿಖೆ ಕೈಗೊಂಡ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಒಬ್ಬರನ್ನು ವಶಕ್ಕೆ ಪಡೆದರು. ಬಳಿಕ ಆತನನ್ನು ವಿಚಾರಿಸಿದಾಗ ಈ ದರೋಡೆ ಕೃತ್ಯವನ್ನು ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳನೊಂದಿಗೆ ನಡೆಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಕಳವಾದ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿರುವ ಮಾಹಿತಿ ಆಧರಿಸಿ ಇನ್ನೂ ಇಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಆರೋಪಿಗಳಿಂದ 4 ಲಕ್ಷ 43 ಸಾವಿರ ರೂಪಾಯಿ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್ಗಳು ಹಾಗೂ 3 ಸಾವಿರ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಇನ್ನೊಬ್ಬ ಆರೋಪಿ ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ಆರೋಪಿತರನ್ನು ಡಿಸೆಂಬರ್ 15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *