ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತೊಗೆಯುವ ಉದ್ದೇಶದಿಂದ ಬೆಂಗಳೂರು ಪೊಲೀಸರು ಕೈಗೊಂಡಿರುವ ‘ಮಿಷನ್ RISE’ ಹಾಗೂ ‘ಬೇಡ ಬ್ರೋ’ ಅಭಿಯಾನಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ.

ಸಿಸಿಬಿ ಸೇರಿದಂತೆ ಒಟ್ಟು 16 ಪೊಲೀಸ್ ಯೂನಿಟ್‌ಗಳು ಕಳೆದ ಹತ್ತು ದಿನಗಳಿಂದ ನಡೆಸಿದ ನಿರಂತರ ಕಾರ್ಯಾಚರಣೆಯಲ್ಲಿ ₹55.8 ಕೋಟಿ ಮೌಲ್ಯದ 200 ಕೆಜಿಗೂ ಅಧಿಕ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ 8 ವಿದೇಶಿಯರು ಹಾಗೂ 21 ಅನ್ಯರಾಜ್ಯದವರು ಸೇರಿದಂತೆ ಒಟ್ಟು 39 ಆರೋಪಿಗಳನ್ನು ಬಂಧಿಸಲಾಗಿದೆ.

ಅಮೃತಹಳ್ಳಿ, ಗಿರಿನಗರ, ಕೆಐಎ ವಿಮಾನ ನಿಲ್ದಾಣ, ಯಶವಂತಪುರ, ಯಲಹಂಕ, ಹೆಬ್ಬಾಳ, ನಂದಿನಿ ಲೇಔಟ್, ಕಾಡುಗೋಡಿ, ಮಲ್ಲೇಶ್ವರಂ, ಗೋವಿಂದಪುರ, ಬಾಗಲೂರು, ಮಹದೇವಪುರ, ಮಹಾಲಕ್ಷ್ಮೀ ಲೇಔಟ್, ಬೇಗೂರು ಹಾಗೂ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ದಂಧೆಕೋರರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ಬಂಧಿತರಿಂದ ₹17 ಲಕ್ಷ ನಗದು, 22 ಮೊಬೈಲ್ ಫೋನ್‌ಗಳು ಹಾಗೂ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಮೃತಹಳ್ಳಿ ಪೊಲೀಸರು ಭಾರಿ ಪ್ರಮಾಣದ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿದ್ದಾರೆ. ಬರೋಬ್ಬರಿ ₹28.8 ಕೋಟಿ ಮೌಲ್ಯದ ಎಂಡಿಎಂಎ (MDMA) ವಶಪಡಿಸಿಕೊಂಡಿರುವ ಪೊಲೀಸರು, ದೆಹಲಿ ಮೂಲದ ಆಮ್ನಿ ಸಿಂಗ್ ಹಾಗೂ ನೈಜೀರಿಯಾ ಮೂಲದ ಓಬಮ್ ಎಂಬ ಇಬ್ಬರನ್ನು ದೆಹಲಿಯಲ್ಲೇ ಬಂಧಿಸಿದ್ದಾರೆ.

ಆರೋಪಿಗಳು ದೆಹಲಿಯಲ್ಲಿ ಮಾದಕ ವಸ್ತುಗಳನ್ನು ತಯಾರಿಸಿ ಬೆಂಗಳೂರಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗ್ರಾಹಕರಿಗೆ ಪೂರೈಕೆ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


