ಚಿಕ್ಕಮಗಳೂರು: ನಗರದ ಹೊರವಲಯದ ಕಣಿವೆ ಕ್ರಾಸ್ ಬಳಿ ಬ್ರೇಕ್ ಫೇಲ್ ಆದ ಪರಿಣಾಮ ಹತ್ತು ಚಕ್ರದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 100 ಅಡಿ ಆಳದ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಆ.10ರ ಸೋಮವಾರ ನಡೆದಿದೆ.

ಕಡೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಮಗಳೂರಿನಿಂದ ಕಡೂರು ಕಡೆಗೆ ಸರಕು ಸಾಗಿಸುತ್ತಿದ್ದ ಲಾರಿ, ಕಣಿವೆ ಕ್ರಾಸ್ ತಲುಪುತ್ತಿದ್ದಂತೆ ದಿಢೀರ್ ಬ್ರೇಕ್ ಫೇಲ್ ಆಗಿದೆ. ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಪಕ್ಕದ ತಡೆಬೇಲಿಯನ್ನು ಮುರಿದು, ಮರಕ್ಕೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಬಿದ್ದಿದೆ.

ಅಪಘಾತದ ರಭಸಕ್ಕೆ ಲಾರಿ ಸಂಪೂರ್ಣ ಜಖಂಗೊಂಡಿದ್ದರೂ, ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿದ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾದರು. ಪ್ರಪಾತದ ತೀವ್ರತೆ ಹೆಚ್ಚಿದ್ದರೂ ಚಾಲಕ ಮತ್ತು ನಿರ್ವಾಹಕ ಅಪಾಯದಿಂದ ಪಾರಾಗಿರುವುದು ಪವಾಡವೇ ಆಗಿದೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


