ಕಾಪು: ಮನೆಯ ಹೆಂಚಿನ ಛಾವಣಿ ಕುಸಿದು ಮಹಿಳೆಯೊಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾದ ಘಟನೆ ಎಲ್ಲೂರಿನಲ್ಲಿ ಶನಿವಾರ(ಆ.8) ಮಧ್ಯರಾತ್ರಿ ನಡೆದಿದೆ.

ಎಲ್ಲೂರು ನಿವಾಸಿ ರೇವತಿ ಕುಂದರ್ ಅವರ ಮನೆಯ ಹೆಂಚಿನ ಛಾವಣಿ ಪಕ್ಕಾಸು ತುಂಡಾದ ಪರಿಣಾಮ ಏಕಾಏಕಿ ಕುಸಿದು, ಅವರು ಮಲಗಿದ್ದ ಕೋಣೆಗೆ ಬಿದ್ದಿದೆ. ಘಟನೆಯಲ್ಲಿ ರೇವತಿ ಕುಂದರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತರ ಕೋಣೆಯಲ್ಲಿ ಮಲಗಿದ್ದವರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

ಮನೆಯ ಸುಮಾರು ಶೇ.75ರಷ್ಟು ಛಾವಣಿ ಕುಸಿದಿದ್ದು, ಘಟನೆಯಿಂದ ಸುಮಾರು ₹3 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಎಲ್ಲೂರು ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ.




