ಪುತ್ತೂರು: ಕಾಫಿ ಬೀಜ ತುಂಬಿದ ಗೋಣಿಚೀಲಗಳನ್ನು ಸಾಗಿಸುತ್ತಿದ್ದ ಲಾರಿಯಿಂದ 21,44,000 ರೂ. ಮೌಲ್ಯದ 80 ಗೋಣಿ ಚೀಲಗಳನ್ನು ಕಳವು ಮಾಡಿದ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆಶ್ಲೇಷ ಭಟ್ ಹಾಗೂ ಆತನ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ, ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.

ಡಿ. 3 ರಂದು ಪಿರಿಯಾ ಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯೊಂದರಿಂದ ತಲಾ 60 ಕೆಜಿ ತೂಕದ 320 ಗೋಣಿ ಚೀಲಗಳನ್ನು ಲೋಡ್ ಮಾಡಿಕೊಂಡು ಮಂಗಳೂರಿಗೆ ತೆರಳಿ ಬಳಿಕ ಪುತ್ತೂರಿನ ನೆಹರು ನಗರದಲ್ಲಿ ಲಾರಿಯನ್ನು ನಿಲ್ಲಿಸಿ ಮನೆಗೆ ತೆರಳಿದ್ದರು.

ಡಿ.೪ ರಂದು ಬೆಳಿಗ್ಗೆ ಮರಳಿ ಬಂದು ಲಾರಿಯನ್ನು ಮಂಗಳೂರಿನ ಬಂದರಿಗೆ ತೆಗೆದುಕೊಂಡು ಹೋಗಿದ ವೇಳೆ ಕಂಪೆನಿಯ ಸಿಬ್ಬಂದಿ ಕ್ವಾಲಿಟಿ ಚೆಕ್ ಮಾಡಲು ಬಂದಾಗ, ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಲೋಡನ್ನು ಪರಿಶೀಲಿಸಿದಾಗ, ಸುಮಾರು ರೂ 21,44,000 ರೂ. ಮೌಲ್ಯದ 80 ಕಾಫಿ ಬೀಜದ ಗೋಣಿ ಚೀಲಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ಆಟೋ, ಒಂದು ಗೂಡ್ಸ್ ಟೆಂಪೋಗಳನ್ನು ಹಾಗೂ ಕಳುವಾದ 60 ಕೆಜಿ ತೂಕದ ಕಾಫಿ ತುಂಬಿದ 80 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



