ಸಜೀಪ ಮೂಡದಲ್ಲಿ ಯಾಂತ್ರಿಕ ನೇಜಿ ನಾಟಿ ಪ್ರಾತ್ಯಕ್ಷಿಕೆ

ಬಂಟ್ವಾಳ: ತಾಲೂಕಿನ ಸಜೀಪ ಮೂಡ ಗ್ರಾಮದ ಸುಭಾಶ್ ನಗರ ಸಮೀಪದ ಕಾಂತಾಡಿಗುತ್ತು ಗದ್ದೆಯಲ್ಲಿ ಯಾಂತ್ರಿಕ ನೇಜಿ ನಾಟಿ ಪ್ರಾತ್ಯಕ್ಷಿಕೆಯು ಡಿ.5 ರಂದು ನಡೆಯಿತು.

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ, ಕಂಬಳ ಕೋಣಗಳ ಯಜಮಾನ ಅವಿಲ್ ಮಿನೇಜಸ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ದಿವಂಗತ ಬಿ. ಸದಾನಂದ ಪೂಂಜ ಇವರ ಪುತ್ರ ಗ್ರಾ. ಪಂ. ಮಾಜಿ ಅಧ್ಯಕ್ಷ ಶೋಭಿತ್ ಪೂಂಜ ನೇತೃತ್ವದಲ್ಲಿ ಸಜಿಪ ಮೂಡ ಗ್ರಾಮದ ಕಾಂತಾಡಿಗುತ್ತುವಿನಲ್ಲಿ ಹಡಿಲು ಬಿದ್ದ 10 ಎಕರೆ ಗದ್ದೆಯಲ್ಲಿ ನೇಜಿ ನಾಟಿ ಮಾಡಲಾಯಿತು.

ವರ್ಷ ಕಳೆದಂತೆ ಅಡಿಕೆ ಬೆಳೆಗೆ ಬೆಲೆ ಏರಿಕೆ ನಡುವೆಯೂ ವಿವಿಧ ರೋಗ ಭಾದೆ ಕಾಟ ಹೆಚ್ಚಳವಾಗುತ್ತಿದ್ದಂತೆಯೇ ಕೃಷಿ ಕಾರ್ಮಿಕರ ಕೊರತೆ ನೆಪದಲ್ಲಿ ಮರೆಯಾಗುತ್ತಿರುವ ಸಾಂಪ್ರದಾಯಿಕ ಭತ್ತ ಬೇಸಾಯದ ಕಡೆಗೆ ಇಬ್ಬರು ಪ್ರಗತಿಪರ ಕೃಷಿಕರು ಮುಂದಾಗಿದ್ದಾರೆ.

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮತ್ತು ಸಜಿಪ ದಸರಾ ಶತಮಾನೋತ್ಸವ ಸಮಿತಿ ಸಹಭಾಗಿತ್ವದಲ್ಲಿ ನಡೆದ ಈ ‘ಯಾಂತ್ರಿಕ ನೇಜಿ ನಾಟಿ’ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾರದಾನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕೂಡಾ ಶಿಕ್ಷಕಿಯರೊಂದಿಗೆ ಸ್ವತಃ ಗದ್ದೆಗೆ ಇಳಿದು ನೇಜಿ ನಾಟಿ ಮಾಡಿ ಗಮನ ಸೆಳೆದರು.

ಈ ವೇಳೆ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಸುಭಾಶ್ ಯುವಕ ಮಂಡಲ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಸಜಿಪಮೂಡ ಸದಾಶಿವ ಈಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಶಾರದಾ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಕಿಶೋರ್ ಪೂಜಾರಿ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ವೇಳೆ ಗ್ರಾ.ಪಂ.ಸದಸ್ಯರಾದ ಸಿದ್ದಿಕ್, ಹಮೀದ್, ಯೋಗೀಶ್ ಬೆಳ್ಚಡ, ಶಿಕ್ಷಕಿ ಜೆಸಿಂತಾ, ಪಿಡಿಒ ಮಾಯಾ ಕುಮಾರಿ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಸಿದ್ಧಕಟ್ಟೆ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *