Breaking
25 Sep 2026, Fri

ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರೋಪಿಗೆ ಜಾಮೀನು ನೀಡಿದ ಆರೋಪ : ವ್ಯಕ್ತಿಯ ಬಂಧನ

ಪುತ್ತೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ, ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿಗೆ ಜಾಮೀನು ಕೊಡಿಸುವ ಮೂಲಕ ವಂಚನೆ ಎಸಗಿದ ಅಬ್ದುಲ್ ಹಾಶೀಮ್ (34) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದಲ್ಲಿ ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದಲ್ಲಿ ಎನ್. ಅಬೂಬಕ್ಕರ್ ಎಂಬವರ ಮಾಲಿಕತ್ವದಲ್ಲಿರುವ ಜಮೀನಿನ ಆರ್ಟಿಸಿಯನ್ನು ತನ್ನ ಹೆಸರಿನಲ್ಲಿರುವ ಜಮೀನಿನ ಆರ್ಟಿಸಿಯೆಂದು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ಸಲ್ಲಿಸಿ, ಆರೋಪಿಗೆ ಜಾಮೀನು ಕೊಡಿಸಿದ್ದನು.

ಈ ಬಗ್ಗೆ ಎನ್. ಅಬೂಬಕ್ಕರ್ ಅವರು ನೀಡಿದ ದೂರಿನಂತೆ ಸೆ.27 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸುಳ್ಳು ಹೇಳಿಕೊಂಡು, ನಕಲಿ ಸಹಿ ಮಾಡಿ ನ್ಯಾಯಾಲಯಕ್ಕೆ ವಂಚಿಸುವ ಉದ್ದೇಶದಿಂದ ಬೆಲೆಬಾಳುವ ಭದ್ರತಾ ಪತ್ರವನ್ನು ಸಲ್ಲಿಸಿದ ಆರೋಪಿ ಅಬ್ದುಲ್ ಹಾಶೀಮ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *