Breaking
20 Jun 2026, Sat

ದ್ವಿಚಕ್ರ ವಾಹನ ಢಿಕ್ಕಿ: ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಅಯ್ಯಪ್ಪ ಮಾಲಾಧಾರಿ ಮೃತ್ಯು

ಕುಂದಾಪುರ: ಅಯ್ಯಪ್ಪ ವೃತಧಾರಿಗಳು ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಢಿಕ್ಕಿಯಾಗಿ ಓರ್ವ ಮಾಲಾಧಾರಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಇನ್ನೋರ್ವ ಮಾಲಾಧಾರಿ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಕಣ್ಣುಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಮಾಲಾಧಾರಿಯಾಗಿದ್ದ ಸುರೇಂದ್ರ ಮೊಗವೀರ (35) ಎಂದು ಗುರುತಿಸಲಾಗಿದೆ.

ನ.2 ರಂದು ಮುಂಜಾನೆ 5.30ರ ಹೊತ್ತಿಗೆ ಸುಮಾರು 15 ಜನ ಅಯ್ಯಪ್ಪ ಮಾಲಾಧಾರಿಗಳು ಕೋಟೇಶ್ವರ ಮಾರ್ಗವಾಗಿ ಮಂದಾರ್ತಿ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಕಣ್ಣುಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದ್ವಿಚಕ್ರ ವಾಹನವು ಸುರೇಂದ್ರ ಅವರಿಗೆ ಹಾಗೂ ಇನ್ನೋರ್ವರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ.

ಪರಿಣಾಮ ಟಿವಿಎಸ್ ಸವಾರ ಸಹಿತ ಸುರೇಂದ್ರ ಹಾಗೂ ಇನ್ನೊಬ್ಬರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಸುರೇಂದ್ರ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *