Breaking
22 Mar 2026, Sun

ಬಂಟ್ವಾಳದ ಸ್ತ್ರೀ ಶಕ್ತಿ, ನ್ಯಾಯವಾದಿ ಶೈಲಜಾ ರಾಜೇಶ್‌ ಅವರಿಗೆ ಜಿಲ್ಲಾ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ

ಬಂಟ್ವಾಳ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಅನೇಕ ಸಂಘ ಸಂಸ್ಥೆಗಳ ಜವಬ್ಧಾರಿಯುತ ಸ್ಥಾನವನ್ನು ನಿಭಾಯಿಸುತ್ತ, ನೊಂದವರ ಕಣ್ಣಿರು ಒರೆಸುವ, ಅಶಕ್ತರ ಪಾಲಿಗೆ ನೆರವಾಗುವ ಸಮಾಜ ಸೇವಕಿ ಬಂಟ್ವಾಳದ ಸ್ತ್ರೀ ಶಕ್ತಿ, ನ್ಯಾಯವಾದಿ ಶೈಲಜಾ ರಾಜೇಶ್‌ ಅವರಿಗೆ ಜಿಲ್ಲಾ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪರಿಚಯ:
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು, ದೈತೋಟಮನೆಯಲ್ಲಿ ಕೃಷ್ಣಸುವರ್ಣ ಮತ್ತು ಗಿರಿಜಾ ಸುವರ್ಣ ದಂಪತಿಗಳ ಮಗಳಾಗಿ ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ತನ್ನ ಹುಟ್ಟೂರಿನಲ್ಲಿ ಪೂರ್ಣಗೊಳಿಸಿದರು. ಬಳಿಕ ಮುಂಡಾಜೆ ಪದವಿ ಪೂರ್ವ ವಿದ್ಯಾಲಯದಲ್ಲಿ ಪಿಯುಸಿ ವಿಧ್ಯಾಭ್ಯಾಸ ವನ್ನು ಪೂರೈಸಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮಂಗಳೂರಿನಲ್ಲಿ ಕಾನೂನು ಪದವಿಯನ್ನು ಪಡೆದರು.

ಹುಟ್ಟಿನಿಂದ ಬಹಳ ಚುರುಕಿನ ವ್ಯಕ್ತಿತ್ವದವರಾಗಿದ್ದ ಇವರು ಪ್ರತಿಭಾನ್ವಿತ ವಿದ್ಯಾರ್ಥಿನಿ. ನೃತ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಹಲವು ಬಾರಿ ಬಹುಮಾನ ಪಡೆದಕೊಂಡ ಹೆಗ್ಗಳಿಕೆ ಇವರದ್ದು . ಸಂಗೀತ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ಹಲವಾರು ಸನ್ಮಾನ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಜ್ಯಮಟ್ಟದ ಕಬ್ಬಡಿ ಕ್ರೀಡಾಪಟು, ತ್ರೋಬಾಲ್ ಚಾಂಪಿಯನ್ ಶಿಪ್ ನ ಉತ್ತಮ ಆಟಗಾರ್ತಿ ಎಂಬ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ಸುಮಾರು 1000 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸಿ, ಸುಮಾರು 800ಕ್ಕೂ ಹೆಚ್ಚು ನೃತ್ಯ ನಿರ್ದೇಶನ ಮಾಡಿ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಪ್ರತಿಭೆಗಳ ಪಾಲಿಗೆ ಬೆಳಕಾಗುವ ಇವರು ಹಲವಾರು ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಶಾಂಭವಿ ಕಿರುಚಿತ್ರದ ನಿರ್ಮಾಪಕರು ಹಾಗೂ ನಾಯಕಿಯಾಗಿ ನಟಿಸಿದ ಶೈಲಜಾ ರಾಜೇಶ್‌ ಅವರು ಚಿತ್ರದ ಅಭಿನಯಕ್ಕಾಗಿ ಜೆಸಿಐ ಅಂತಾರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆ ಯಲ್ಲಿ ಅತ್ಯುತ್ತಮ ನಟಿ ಎಂಬ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವಾರು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡುತ್ತಾ ತನ್ನ ಮಾತಿನ ಸಿಹಿಯನ್ನು ಜನರಿಗೆ ಉಣಬಡಿಸಿದ್ದಾರೆ.

ಶ್ರೀ ಶೈಲ ಪೊಡಕ್ಷನ್ ಯೂಟ್ಯೂಬ್ ಚಾನೆಲ್ ನ ಸಂಸ್ಥಾಪಕರಾಗಿರುವ ಇವರು ಹಲವಾರು ಸಂಗೀತ ಪ್ರತಿಭೆಗಳಿಗೆ ಅವಕಾಶ ನೀಡಿ ಹಲವಾರು ಸಾಹಿತ್ಯಗಳಿಗೆ ಹಿನ್ನೆಲೆ ದ್ವನಿ ನೀಡಿದ್ದಾರೆ. ಧಾರ್ಮಿಕ ಪ್ರವಚನ ಮತ್ತು ಸ್ಫೂರ್ತಿದಾಯಕ ಭಾಷಣ, ದಿಕ್ಸೂಚಿ ಭಾಷಣಕಾರರಾಗಿದ್ದು, ಇವರು ಮಕ್ಕಳು, ಸಾರ್ವಜನಿಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಹಲವಾರು ತರಬೇತಿ ಶಿಬಿರವನ್ನು ಆಯೋಜಿಸಿದ್ದಾರೆ.

ಸಮಾಜ ನನಗೆ ಏನು ನೀಡಿದೆ ಅನ್ನೊದಕ್ಕಿಂತ, ನಾನು ಸಮಾಜಕ್ಕೆ ಏನನ್ನೂ ನೀಡುತ್ತೀನಿ ಅನ್ನೊದು ಮುಖ್ಯವಾಗುತ್ತೇ ಎನ್ನುವ ಶೈಲಜಾರವರು ನೊಂದ ಮನಸ್ಸುಗಳ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದ್ದಾರೆ.

“ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಇದು ಕಳೆದ 15ವರ್ಷದ ಹಿಂದೆ ಇವರು ಹುಟ್ಟು ಹಾಕಿದ ಕನಸಿನ ಕೂಸು. ಈ ಸಂಸ್ಥೆಯ ಮೂಲಕ ಹಲವಾರು ಕ್ಯಾನ್ಸರ್ ಪೀಡಿತರಿಗೆ, ನೊಂದ ಮಹಿಳೆಯರಿಗೆ, ಬಡವರಿಗೆ ಆಶ್ರಮಗಳಿಗೆ ಸಹಾಯ ಮಾಡುವುದರ ಜೊತೆಗೆ ಹಲವಾರು ಜೀವ ಮತ್ತು ಜೀವನಗಳಿಗೆ ಬೆಳಕಾಗಿದ್ದಾರೆ.

ಕ್ಯಾನ್ಸರ್ ಪೀಡಿತರಿಗೆ ಧನ ಸಹಾಯ ರಕ್ತದೊತ್ತಡ ಮತ್ತು ರಕ್ತ ಪರೀಕ್ಷೆ,ರಕ್ತ ದಾನ ಶಿಬಿರ ಆರೋಗ್ಯ ಮಾಹಿತಿ ಮತ್ತು ವೃದ್ದಾಶ್ರಮದಲ್ಲಿ ಧನಸಹಾಯ, ನೊಂದ ಮಹಿಳೆಗೆ ಅಂಗವಿಕಲರಿಗೆ ಸಾಂತ್ವನ, ಬುದ್ಧಿಮಾಂದ್ಯರಿಗೆ, ಗಂಡ ಹೆಂಡತಿ ಸಮಸ್ಯೆಗೆ ಆಪ್ತ ಸಮಾಲೋಚನೆ ನಡೆಸಿ ಹಲವಾರು ಅಶಕ್ತರಿಗೆ ನೆರವಾದ ಹಿರಿಮೆ ಇವರದ್ದು. ಗಂಡ ಹೆಂಡತಿ ಸಮಸ್ಯೆಗೆ ಪರಿಹಾರ ನೀಡುವುದು ಮಹಿಳೆಯರ ನೋವಿಗೆ ಸ್ಪಂದಿಸುವುದು ಇವರ ಮಾನವೀಯ ಕಾರ್ಯ. ತನ್ನ ಮಾತಿನಿಂದ ಕೇಳುಗರನ್ನು ಆಕರ್ಷಿಸುವ ಇವರಿಗೆ ಸಂಘ ಸಂಸ್ಥೆಗಳು, ಊರಿನವರು, ಶಾಲಾ , ಕಾಲೇಜು ವಿದ್ಯಾ ಸಂಸ್ಥೆಗಳು ಆಳ್ವಾಸ್ ಕಾಲೇಜು, ಎಸ್ ಡಿ ಎಂ , ಮೂಲ್ಕಿ ವಿಜಯ ಕಾಲೇಜು, ಸುರತ್ಕಲ್ ಗೋವಿಂದಾ ಸ ಕಾಲೇಜು, ಹಲವಾರು ವಿದ್ಯಾಸಂಸ್ಥೆಗಳಿಂದ ಅಪಾರ ಬೇಡಿಕೆ ಇದೆ.

ಜೆ.ಸಿ.ಐ ಜೋಡುಮಾರ್ಗ ನೇತ್ರಾವತಿಯ ಪೂರ್ವ ಅಧ್ಯಕ್ಷರಾಗಿರುವ ಇವರು, ತರಬೇತುದಾರರಾಗಿ ಹಲವಾರು ತರಬೇತಿಗಳನ್ನು, ಕಾರ್ಯಕ್ರಮಗಳನ್ನು ಸಮಾಜಸೇವೆಯನ್ನು ಮಾಡಿದ್ದಾರೆ.

ಅಂತಾರಾಷ್ಟ್ರೀಯ ಪ್ರಶಸ್ತಿಗಳಾದ ರೈತ ಸ್ನೇಹಿ ಪುರಸ್ಕಾರ, ಸಿಲ್ವರ್ ಸ್ಟಾರ್ ಲೋಮ್ ಪ್ರಸಿಡೆಂಟ್, ಸ್ಪೀಚ್ ಕ್ರಾಪ್ಟ್ ಅವ್ಟ್ ಸ್ಟ್ಯಾಂಡಿಂಗ್ ಅವಾರ್ಡ್(speach craft outstanding award) ,”ಅತ್ಯುತ್ತಮ ಅಧ್ಯಕ್ಷೆ” ಪ್ರಶಸ್ತಿ, zone training outstanding leader award ಕೋರೋನಾ ಸಮಯದಲ್ಲಿ ಬಡಕುಟುಂಬಗಳಿಗೆ ಕಿಟ್ ವಿತರಣೆ ಮತ್ತು ಧನಸಹಾಯಕ್ಕಾಗಿ “ಜೀರೊ ಹಂಗರ್” ಪ್ರಶಸ್ತಿ, ಜನಸ್ನೇಹಿ ಪುರಸ್ಕಾರ ಅಲ್ಲದೇ ಹಲವಾರು ಸಂಘ ಸಂಸ್ಥೆಗಳಿಂದ ಹಲವಾರು ಸನ್ಮಾನ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ನಾಟ್ಯ ರಾಣಿ, ನೃತ್ಯ ತಾರೆ , ರಾಜ್ಯ ಮಹಿಳಾ ರತ್ನ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಅಂತಾರಾಷ್ಟ್ರೀಯ ಕಿರುಚಿತ್ರ ಅತ್ಯುತ್ತಮ ನಟಿ ಪ್ರಶಸ್ತಿ, ಪಡೆದಿರುತ್ತಾರೆ. ಹಲವಾರು ರಾಜ್ಯ,ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದಾರೆ.

ಕಳೆದ 15 ವರ್ಷಗಳಿಂದ ಬಿ.ಸಿ.ರೋಡ್ ನಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಆಪ್ತ ಸಮಾಲೋಚಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತಿ ಡಾ. ರಾಜೇಶ್ ಪೂಜಾರಿ ಮತ್ತು ಶೌರ್ಯ ,ಶ್ರೇಷ್ಠ ಎಂಬ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಮಹಿಳಾ ಪರ ಸರ್ವತೋಮುಖ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವು “ಅಂತಾರಾಷ್ಟ್ರೀಯ ಮಹಿಳಾ ದಿನಚರಣೆ ಯಂದು , ಸನ್ಮಾನ್ಯ ಬಸವರಾಜ್ ಬೊಮ್ಮಾಯಿ ಮಾಜಿ ಮುಖ್ಯ ಮಂತ್ರಿಯವರು, ಕರ್ನಾಟಕ ಸರಕಾರದ ಪ್ರತಿಷ್ಠಿತ “ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ”ಯನ್ನೂ ನೀಡಿ ಗೌರವಿಸಿದೆ. ಬಾಳ್ತಿಲ ಗ್ರಾಮದ ಅರ್ಧನಾರೀಶ್ವರ ದೇವಸ್ಥಾನದ ವಾಸುಕಿ ನಾಗಾಲಯದ ಆಡಳಿತ ಮೊಕ್ತೇಸರರು, ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರು, ದ.ಕ.ಜಿಲ್ಲಾ ಮೂರ್ತೆದಾರ ಸಹಕಾರಿ ಬ್ಯಾಂಕಿನ ನಿರ್ದೇಶಕರು ಆಗಿರುತ್ತಾರೆ.

ಅಂತಾರಾಷ್ಟ್ರೀಯ ಸಂಸ್ಥೆಯ ವಲಯ ತರಬೇತುದಾರ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದು outstanding performance ನೊಂದಿಗೆ ತೇರ್ಗಡೆ ಹೊಂದಿರುತ್ತಾರೆ. 4 ವರ್ಷದ ಫೇಸ್ಬುಕ್ ಪ್ರೇಮ ಪ್ರಕರಣ ಮಂಗಳಮುಖಿ ಹೆಣ್ಣಿನ ಬಾಳಲ್ಲಿ ಚೆಲ್ಲಾಟ ಆಡಿ ಇದನ್ನು ಒಂದೇ ದಿನದಲ್ಲಿ ಅಂತ್ಯ ಕಾಣಿಸಿ ಮಾನಸಿಕ ಸಮತೋಲನ ಕಳೆದುಕೊಂಡ ಹೆಣ್ಣಿನ ಜೀವನ ಮತ್ತು ಮನೆಯವರನ್ನು ಕಾಪಾಡಿದ ಹಿರಿಮೆ ಇವರದ್ದು.

ಪ್ರತಿಷ್ಠಿತ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಾಗಿ, ಸುಮಾರು 12 ವರ್ಷಗಳಿಂದ ಪ್ರತಿಷ್ಠಿತ ಬಿಲ್ಲವ ಸಂಘದ ಸದಸ್ಯರಾಗಿ, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಮಾಜಿ ಅಧ್ಯಕ್ಷರು, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ) ಸಂಚಾಲಕರು ಆಗಿರುತ್ತಾರೆ. ಜವಾಹರ್ ಬಾಲ್ ಮಂಚ್ ನ ಜಿಲ್ಲಾ ಅಧ್ಯಕ್ಷರಾಗಿ ಮಕ್ಕಳ ಶ್ರೇಯೋಭಿವೃದ್ಧಿ ಗಾಗಿ ಶ್ರಮಿಸುತ್ತಿದ್ದಾರೆ.

ಇವರ ನೇತೃತ್ವದಲ್ಲಿ 25 ಮಕ್ಕಳು ಜವಾಹರ್ ಬಾಲ್ ಮಂಚ್ ನ ವತಿಯಿಂದ ನಡೆದ ರಾಜ್ಯಮಟ್ಟದ ಮಕ್ಕಳೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದು 5ಜನ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ಮಕ್ಕಳೊಂದಿಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುತ್ತಾರೆ. ಅಲ್ಲದೆ ಜಿಲ್ಲೆಯಾದ್ಯಂತ ಬೇರೆ ಬೇರೆ ತಾಲೂಕುಗಳಲ್ಲಿ ಮಕ್ಕಳ ಪ್ರತಿಭೆ , ವ್ಯಕ್ತಿತ್ವ ವಿಕಸನ .ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ರೀಡಾ ಕ್ಷೇತ್ರಗಳಲ್ಲಿ ಅವಕಾಶಗಳನ್ನು ನೀಡುತ್ತಿದ್ದಾರೆ.

ಪ್ರಶಸ್ತಿಗಳನ್ನು ಬಯಸದೆ, ತಂದೆಯ ಮಾರ್ಗದರ್ಶನದಂತೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ನಿಸ್ವಾರ್ಥ ಸೇವಾ ಮನೋಭಾವದ ಶ್ರೀಮತಿ ಶೈಲಜಾ ರಾಜೇಶ್‌ ಅವರಿಗೆ ಈ ಬಾರಿ ಜಿಲ್ಲಾ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Leave a Reply

Your email address will not be published. Required fields are marked *