ಕಟಪಾಡಿ: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ
ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ
ನಾಗರಾಜ್ ಬಲ್ಲಾಳ್ ಇವರಿಗೆ ಕರ್ನಾಟಕ ರಾಜ್ಯದ ನೋಂದಾಯಿತ ಅನುದಾನ
ರಹಿತ ಶಿಕ್ಷಣ ಸಂಸ್ಥೆಗಳ ಸಂಘ (ರುಪ್ಸಾ)ದಿಂದ ಕೊಡಮಾಡುವ 2024-
25ನೇ ಸಾಲಿನ ಉತ್ತಮ ಆಡಳಿತ ಮಂಡಳಿ ಆಡಳಿತಗಾರ ಪ್ರಶಸ್ತಿ
ದೊರೆತಿದೆ. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇವರು ಪ್ರಶಸ್ತಿ
ಪ್ರಧಾನ ಮಾಡಿದರು. ನಾಗರಾಜ್ ಬಲ್ಲಾಳ್ ಇವರು ಆನಂದತೀರ್ಥ
ಸಮೂಹ ಶಿಕ್ಷಣ ಸಂಸ್ಥೆಗಳ ಅಡಳಿತ ಮಂಡಳಿಯ
ಕಾರ್ಯಾಧ್ಯಕ್ಷರಾಗಿ ಸುಮಾರು ಹತ್ತು ವರ್ಷಗಳಿಂದ ಸೇವೆ
ಸಲ್ಲಿಸುತ್ತಿದ್ದು, ಅವರ ಅವಿರತ, ನಿಸ್ವಾರ್ಥ ಸೇವೆಗೆ ಅರ್ಹವಾಗಿಯೇ
ಅವರಿಗೆ ಈ ಪ್ರಶಸ್ತಿ ದೊರೆತಿದೆ.
ತಮ್ಮ ಆಡಳಿತಾವಧಿಯಲ್ಲಿ ಪಾಜಕ ಕ್ಷೇತ್ರವನ್ನು ಒಂದು
ಶೈಕ್ಷಣಿಕ ಹಬ್ ಆಗಿ ಪರಿವರ್ತಿಸುವಲ್ಲಿ ನಾಗರಾಜ್ ಬಲ್ಲಾಳ್ ಇವರ
ಕೊಡುಗೆ ಅಪಾರ. ತಮ್ಮದೇ ಡೆವಲಪ್ರ‍್ಸ್ ಸಂಸ್ಥೆಯ ಕೆಲಸದ
ಒತ್ತಡದ ನಡುವೆ ಆನಂದತೀರ್ಥ ಶಿಕ್ಷಣ ಸಂಸ್ಥೆಗಳ
ಬೆಳವಣಿಗೆಗೆ, ಅಲ್ಲಿ ಆಗಬೇಕಾದ ಕೆಲಸ ಕಾರ್ಯಗಳಿಗೆ ಇವರು
ಸದಾ ಸಿದ್ಧರಿರುತ್ತಾರೆ. ಶ್ರೀ ವಿಶ್ವೇಶತೀರ್ಥ
ಶ್ರೀಪಾದರು ಇವರ ಕೆಲಸದ ಮೇಲಿನ ಬದ್ಧತೆಯನ್ನು ಕಂಡು ಇಡಿ
ಆನಂದತೀರ್ಥ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ನೀಡಿದ್ದು,
ಅದರಂತೆ ಈಗಿನ ಶ್ರೀಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ
ಸೂಚನೆ, ಸಲಹೆಯಂತೆ ಇಡೀ ಶಿಕ್ಷಣ ಸಂಸ್ಥೆಯ ಕೆಲಸಗಳಿಗೆ
ತಮ್ಮನ್ನು ತಾವು ತೊಡಗಿಸಿಕೊಂಡು ಶ್ರೀಗಳ ಕನಸನ್ನು
ನನಸು ಮಾಡಲು ಅವಿರತ ಶ್ರಮಿಸುತ್ತಿದ್ದಾರೆ.
ಪ್ರಶಸ್ತಿ ದೊರೆತಿರುವುದಕ್ಕೆ ಆನಂದತೀರ್ಥ ಶಿಕ್ಷಣ ಸಂಸ್ಥೆಗಳ
ಎಲ್ಲಾ ಸದಸ್ಯರು, ಆನಂದತೀರ್ಥ ಪ.ಪೂರ್ವ ಕಾಲೇಜು ಹಾಗೂ ಶ್ರೀ
ವಿಶ್ವೇಶತೀರ್ಥ ಮಹಾವಿದ್ಯಾಲಯ ಪದವಿ ಕಾಲೇಜಿನ ಪ್ರಾಂಶುಪಾಲ
ವಿಜಯ್ ಪಿ. ರಾವ್, ಆನಂದತೀರ್ಥ ವಿದ್ಯಾಲಯ ಪ್ರಿನ್ಸಿಪಲ್ ಡಾ. ಗೀತಾ ಶಶಿಧರ್,
ಶಿಕ್ಷಕ ಶಿಕ್ಷಕೇತರ ವೃಂದದವರು, ಸಂತಸ ವ್ಯಕ್ತಪಡಿಸಿ ಶುಭ
ಹಾರೈಸಿದ್ದಾರೆ.
“ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಈ ಬೆಳವಣಿಗೆಗೆ
ನಾಗರಾಜ್ ಬಲ್ಲಾಳ್ ಇವರ ಅವಿರತ ಶ್ರಮವೇ ಕಾರಣ. ಪ್ರತೀ
ಕೆಲಸದಲ್ಲೂ ಮುಂದಾಲೋಚನೆಯಿoದ ಕೆಲಸ ಮಾಡುವ ಇವರು,
ತಮ್ಮದೇ ಇತರೇ ಕೆಲಸದ ಎಷ್ಟೇ ಒತ್ತಡ ಇದ್ದರೂ ಆನಂದತೀರ್ಥ ಶಿಕ್ಷಣ ಸಂಸ್ಥೆಗಳ ಕೆಲಸಕ್ಕೆ ಮೊದಲ ಪ್ರಾಮುಖ್ಯತೆ
ಕೊಟ್ಟಿರುವುದರಿಂದ ಹತ್ತೇ ವರ್ಷದಲ್ಲಿ ಎರಡು ಸಾವಿರದ ಎಂಟು
ನೂರು ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ
ಮಾಡುವಂತಾಗಿದೆ.
ಇವರ ಸೇವೆಗೆ ಅರ್ಹವಾಗಿಯೇ ಈ ಪ್ರಶಸ್ತಿ ದೊರೆತಿದೆ. ಇವರ
ಸೇವೆಯು ಇನ್ನಷ್ಟು ವರ್ಷ ಮುಂದುವರೆಯಲಿ ಎಂಬುದೇ ನಮ್ಮ
ಹಾರೈಕೆ.”