ಬಂಟ್ವಾಳ: ರೈತರು ತಮ್ಮ ಕೃಷಿ ಜಮೀನನಲ್ಲಿ ಬೆಳೆಯುವ ಬೆಳೆಗಳ ಸಮೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಈ ಮೂಲಕ ರೈತರಿಗೆ ಸಿಗುವ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ, ಫಸಲ್ ಭೀಮಾ ಯೋಜನೆ , ಬೆಳೆಸಾಲ ,ಬೆಳೆ ನಷ್ಟ ,ಇತ್ಯಾದಿ ಯೋಜನೆಗಳ ಪ್ರಯೋಜನಗಳು ಬೆಳೆ ಸಮೀಕ್ಷೆ ಮಾಡಿದ್ದಲ್ಲಿ ಮಾತ್ರ ಸಂಬಂಧ ಪಟ್ಟ ರೈತರಿಗೆ ದೊರಕುತ್ತದೆ . ಈ ಬಗ್ಗೆ ಆಸಕ್ತಿಯ ಕೆಲವೇ ಕೆಲವು ರೈತರು ಮಾತ್ರ ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಯನ್ನು ಸಮೀಕ್ಷೆ ಮಾಡಿರುತ್ತಾರೆ. ಇನ್ನುಳಿದ ಸಮೀಕ್ಷೆ ಮಾಡಲು ಗೊತ್ತಾಗದ, ಸರ್ವರ್ ಸಮಸ್ಯೆ, ಇನ್ನಿತರ ಸಮಸ್ಯೆಗಳಿಂದ ರೈತರು ತಮ್ಮ ಬೆಳೆ ಸಮೀಕ್ಷೆಗಾಗಿ ಕಂದಾಯ ಇಲಾಖೆಯ ಖಾಸಗಿ ಬೆಳೆ ಸಮೀಕ್ಷೆದಾರರನ್ನು ಅವಲಂಬಿತರಾಗುವ ಅನಿವಾರ್ಯ ಪರಿಸ್ಥಿತಿಯಲ್ಲಿ ಇದ್ದಾರೆ.
ಸರಕಾರದ ಕಂದಾಯ ಇಲಾಖೆ ವತಿಯಿಂದ ಪ್ರತಿ ಗ್ರಾಮಗಳಿಗೆ ಒಬ್ಬರಂತೆ ಖಾಸಗಿ ಬೆಳೆ ಸಮೀಕ್ಷೆದಾರರನ್ನು ನೇಮಕ ಮಾಡಲಾಗಿದ್ದು . ಈ ರೀತಿಯಾಗಿ ನೇಮಕ ಮಾಡಲಾದ ಖಾಸಗಿ ಬೆಳೆ ಸಮೀಕ್ಷೆದಾರರು ದಿನವೊಂದಕ್ಕೆ ಕೇವಲ 40-50 ಪ್ಲಾಟ್ ಸಮೀಕ್ಷೆ ಮಾಡುತ್ತಿರುವುದಾಗಿದ್ದು ಅಷ್ಟೇನೂ ಪ್ರಗತಿ ಸಾಧ್ಯವಾಗುತ್ತಿಲ್ಲ. ಅಂದರೆ ಖಾಸಗಿ ಬೆಳೆಸಮೀಕ್ಷೆದಾರರಿಗೆ ಪ್ಲಾಟ್ ಗೆ 10ರೂ ರಂತೆ ,ನೀಡುವ ದರ ತೀರಾ ಕಡಿಮೆ ಇರುವುದರಿಂದ ಹಾಗೂ ಪ್ರತಿ ಪ್ಲಾಟ್ ಗಳಿಗೆ ಹೋಗಿಯೇ ಸಮೀಕ್ಷೆ ಮಾಡಬೇಕಾಗಿರುವುದರಿಂದ ಖಾಸಗಿ ಬೆಳೆ ಸಮೀಕ್ಷೆದಾರರು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ.ಇದರಿಂದ ಬೆಳೆ ಸಮೀಕ್ಷೆ ಪ್ರಗತಿ ಕೆಲವು ಗ್ರಾಮಗಳಲ್ಲಿ ಶೇ 25% ರಷ್ಟು ಆಗಿರುವುದಿಲ್ಲ. ಇದರಿಂದ ಬೆಳೆ ಸಮೀಕ್ಷೆ ಮಾಡದ ರೈತರು ಸಮೀಕ್ಷೆಗಾಗಿ ಪರದಾಡುತ್ತಿದ್ದಾರೆ.
ಇದಕ್ಕೆಲ್ಲ ಸಂಬಂಧ ಪಟ್ಟ ಇಲಾಖೆಯೇ ಹೊಣೆಗಾರರಾಗಿರುತ್ತದೆ.
ಈ ಗೊಂದಲದ ಅಸಂಬದ್ಧ ಆದೇಶದಿಂದಾಗಿ ರೈತರ ಬೆಳೆ ಸಮೀಕ್ಷೆ ಪರಿಪೂರ್ಣ ವಾಗದೆ ಬಹುತೇಕ ರೈತರು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ವಂಚಿತರಾಗಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಬೆಳೆ ಸಮೀಕ್ಷೆ ಗಡುವು ಅವಧಿಯನ್ನೂ ನವೆಂಬರ್ ತಿಂಗಳ ತನಕ ವಿಸ್ತರಣೆ ಮಾಡಬೇಕು. ಅಥವಾ ಕಡ್ಡಾಯ ಬೆಳೆ ಸಮೀಕ್ಷೆ ಕೈ ಬಿಡಬೇಕು ಎಂದು ಕರ್ನಾಟಕ ಕೃಷಿ ಸಚಿವರಿಗೆ ಸಿ. ಎ ಬ್ಯಾಂಕ್ ಸಿದ್ದಕಟ್ಟೆ ಅಧ್ಯಕ್ಷ ಪ್ರಭಾಕರ ಪ್ರಭು ಮನವಿ ಸಲ್ಲಿಸಿದ್ದಾರೆ.