ಪುತ್ತೂರು: ತಿಂಡಿ ಪಾರ್ಸೆಲ್ ಗೆ ಬಂದಿದ್ದ ವೇಳೆ ಅಪರಿಚಿತ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಾಯಿ ನಿವಾಸಿ ಪ್ರವೀಣ್ ಎಂಬವರು ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದು, ಪುತ್ತೂರು ತಾಲೂಕಿನ ಕಾವೇರಿಕಟ್ಟೆ ಬಳಿ ಈ ಘಟನೆ ನಡೆದಿದೆ.

ಸಂತ್ರಸ್ತ ಪ್ರವೀಣ್ ಅವರು ತನ್ನ ಅಕ್ಕನ ಕಾರಿನಲ್ಲಿ ಕಾವೇರಿಕಟ್ಟೆ ಬಳಿ ಬಂದು ಅಲ್ಲಿ ತಿಂಡಿ ಪಾರ್ಸೆಲ್ ತೆಗೆದುಕೊಳ್ಳುತ್ತಿದ್ದ ಸಂದರ್ಭ ಅಲ್ಲಿಯೇ ನಿಂತಿದ್ದ ನಾಲ್ಕರಿಂದ ಐದು ಮಂದಿ ಅಪರಿಚಿತರೊಂದಿಗೆ ಮಾತಿಗೆ ಮಾತು ಬೆಳೆದಿತ್ತು.

ಬಳಿಕ ಅವರ ಕಾರನ್ನು ತಡೆದು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಪ್ರವೀಣ್ ಅವರ ಜೊತೆಯಲ್ಲಿದ್ದ ಪುಜ್ವಲ್ ಅವರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



