Breaking
23 Mar 2026, Mon

4 ತಿಂಗಳ ಹಿಂದೆ ನಡೆದ ರಸ್ತೆ ಅಪಘಾತ: ಕೋಮಾದಲ್ಲಿದ್ದ ಅಪೂರ್ವ ಭಟ್ ಇನ್ನು ನೆನಪು ಮಾತ್ರ!

ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಸಮೀಪ ನಾಲ್ಕು ತಿಂಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು 134 ದಿನಗಳಿಂದ ಕೋಮಾದಲ್ಲಿದ್ದು ಸಾವು -ಬದುಕಿನ‌ ನಡುವೆ ಹೋರಾಟ ನಡೆಸುತ್ತಿದ್ದ ಅಪೂರ್ವ ಭಟ್‌ (30) ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಖಾಸಗಿ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಅಂಡೆಪುಣಿ ಈಶ್ವರ ಭಟ್ ಮತ್ತು ಪುತ್ರಿ ಅಪೂರ್ವ ಭಟ್‌(30) ಅವರು ಗಂಭೀರ ಗಾಯಗೊಂಡಿದ್ದರು. ಈಶ್ವರ ಭಟ್ ಅವರ ಮೊಮ್ಮಗಳು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದರು.

ಗಂಭೀರ ಗಾಯಗೊಂಡಿದ್ದ ಈಶ್ವರ ಭಟ್ ಮತ್ತು ಅವರ ಮಗಳು ಅಪೂರ್ವ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಈ ನಡುವೆ ಈಶ್ವರ ಭಟ್ ಅವರು ಚೇತರಿಸಿಕೊಂಡಿದ್ದರು. ಅಪೂರ್ವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

ಪತ್ನಿ ಚೇತರಿಕೆಗಾಗಿ ಫಲಿಸದ ಪತಿಯ ಪ್ರಾರ್ಥನೆ
ಅಪೂರ್ವ ಅವರ ಪತಿ ಆಶಿಶ್ ಸಾರಡ್ಕ ಅವರು, ಪತ್ನಿ ಚೇತರಿಸಿಕೊಳ್ಳಲಿ ಎಂದು ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಪ್ರಾರ್ಥಿಸಿದ್ದರು. “ತಾಯಿ ಪ್ರೀತಿಗೋಸ್ಕರ ಹಂಬಲಿಸುತ್ತಿರುವ ಮಗಳಿಗಾಗಿ ಪ್ರಾರ್ಥಿಸಿ” ಎಂದು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಸಾವಿರಾರು ಜನರು ಅವರ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಪತ್ನಿಯ ಚಿಕಿತ್ಸೆಗಾಗಿ ಬೆಂಗಳೂರಿನಿಂದ ಮಂಗಳೂರಿಗೆ ಮನೆ ಶಿಫ್ಟ್ ಮಾಡಿದ್ದರು. ಆದರೆ ಅಪೂರ್ವ ಭಟ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ, ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *