ಪುತ್ತೂರು: ಖೋಟಾನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಆ. 25ರಂದು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳದ ಬಿ.ಸಿ ರೋಡ್, ಜೋಡು ಮಾರ್ಗ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ನಿಜಾಮ್ (33) ಎಂದು ಗುರುತಿಸಲಾಗಿದೆ.

ಆರೋಪಿಯ ವಿರುದ್ಧ 2023 ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಗಡೆ ಬಂದಿದ್ದ. ನಂತರ ಪ್ರಕರಣದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಈತನ ಮೇಲೆ 8 ಬಾರಿ ಬಂಧನ ವಾರಂಟ್ ಹೊರಡಿಸಿರುತ್ತದೆ.

ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ವಾರಂಟ್ ಜಾರಿ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಬಳಿಯ ವಲಾಲು ಎಂಬಲ್ಲಿ ಈತನನ್ನು ಆ. 25ರಂದು ದಸ್ತಗಿರಿ ಮಾಡಿದ್ದಾರೆ.
ಆರೋಪಿಯು ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಮೇರೆಗೆ ಆತನ ವಿರುದ್ಧ ಕ್ರಮ ಕೈಗೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಯ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಸೇರಿದಂತೆ ಹಲವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.



