ಬೆಂಗಳೂರು: ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ (87) ಅವರು ಜು.14 ರಂದು ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

1938 ಜನವರಿ 7 ರಂದು ಜನಿಸಿದ ಬಿ.ಸರೋಜಾದೇವಿ ಅವರು ಕನ್ನಡ, ತಮಿಳು, ತೆಲುಗು ಹಿಂದಿ ಸೇರಿದಂತೆ 5 ಭಾಷೆಯ ಚಿತ್ರರಂಗದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು ಅವರು ʼಅಭಿನಯ ಸರಸ್ವತಿʼ ಎಂದೇ ಖ್ಯಾತಿ ಪಡೆದಿದ್ದರು.
ಅವರು ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಕಿತ್ತೂರು ಚೆನ್ನಮ್ಮ, ಅಣ್ಣ ತಮ್ಮ, ಭಕ್ತ ಕನಕದಾಸ, ಬಾಳೆ ಬಂಗಾರ, ನಾಗಕನ್ನಿಕೆ, ಬೆಟ್ಟದ ಹೂವು, ಮತ್ತು ಕಸ್ತೂರಿ ನಿವಾಸದಂತಹ ಹಲವಾರು ಕನ್ನಡ ಶ್ರೇಷ್ಠ ಚಿತ್ರಗಳಲ್ಲಿ ಸಾಂಪ್ರದಾಯಿಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ತಮಿಳು ಚಿತ್ರರಂಗದಲ್ಲಿ, ನಾಡೋಡಿ ಮನ್ನನ್, ಕರ್ಪೂರ ಕರಸಿ, ಪಾಂಡುರಂಗ ಮಹಾತ್ಯಂ, ಮತ್ತು ತಿರುಮಾನಂ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ಕಾಣಿಸಿಕೊಂಡವರು.
ಭಾರತೀಯ ಚಿತ್ರರಂಗಕ್ಕೆ ಬಿ.ಸರೋಜಾದೇವಿ ಅವರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ, ಅವರಿಗೆ 1969 ರಲ್ಲಿ ಪದ್ಮಶ್ರೀ ಮತ್ತು 1992 ರಲ್ಲಿ ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದ್ದು ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದರು.


