ಸಂಸ್ಕಾರ ಭಾರತೀ ಗುರುವಂದನಾ ಕಾರ್ಯಕ್ರಮ: “ಸತ್ಯ, ಸಾಕ್ಷತ್ಕಾರವೇ ಕಲೆಯ ಪರಮ ಗುರಿ”: ಆನಂದ- ಸೂರಿಕುಮೇರು ಗೋವಿಂದ ಭಟ್

ಬಂಟ್ವಾಳ : ಯಾವುದೇ ಕಲಾ ಪ್ರಕಾರ, ಧರ್ಮಪ್ರಕಾರ, ಧರ್ಮಜಾಗೃತಿಯನ್ನು ಮಾಡಬೇಕು, ಆನಂದವನ್ನು ನೀಡಬೇಕು. ಸತ್ಯ, ಸಾಕ್ಷತ್ಕಾರವೇ ಕಲೆಯ ಪರಮ ಗುರಿ ಎಂದು ಹಿರಿಯ ಯಕ್ಷಗಾನ ಕಲಾವಿದ ದಶಾವತಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಕೆ. ಗೋವಿಂದ ಭಟ್ ಹೇಳಿದರು.

ಅವರು ಬಿಸಿರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲಾ ಬಂಟ್ವಾಳ ಘಟಕದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ನಟರಾಜ ಪೂಜನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಲೆ ಎಂಬುದು ಅಮೂರ್ತವಾದುದು. ಯಕ್ಷಗಾನವು ಸೃಜನಶೀಲ ಕಲೆಯಾಗಿದ್ದು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತಿದೆ. ಕಲೆಗಳ ಮೂಲ ಉದ್ದೇಶವಿರುವುದು ಜನರ ಶಾಂತಿ, ಸಮಾಧಾನ ಎಂದರು.

ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅಭಿನಂದನಾ ಭಾಷಣ ಮಾಡಿ ಮೇರು ವ್ಯಕ್ತಿತ್ವ ಹಾಗೂ ವಿದ್ವತ್ತು ಹೊಂದಿರುವ ಗೋವಿಂದ ಭಟ್ಟರಿಗೆ ತನ್ನೊಂದಿಗೆ ಇತರ ಕಲಾವಿದರನ್ನೂ ರಂಗದಲ್ಲಿ ಬೆಳೆಸಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ, ಸನಾತನ ಹಿಂದೂ ಧರ್ಮದ ಪರಂಪರೆಯೇ ಗುರು- ಶಿಷ್ಯ ಸಂಸ್ಕೃತಿ. ಗುರುವನ್ನು ಮರೆಯದ ಕ್ಷೇತ್ರವಿದ್ದರೆ ಅದು ಕಲಾ ಕ್ಷೇತ್ರ. ಕಲೆಯು ವ್ಯಕ್ತಿಯ ವಿಕಸನದೊಂದಿಗೆ ರಾಷ್ಟ್ರದ ವಿಕಾಸಕ್ಕೆ ಪೂರಕವಾಗಿದೆ. ಧರ್ಮ ಸಂಸ್ಕೃತಿ, ಸಂಸ್ಕಾರವನ್ನು ಸೇವೆ ಮತ್ತು ತ್ಯಾಗದ ಮೂಲಕ ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದರು.

ಪ್ರಮುಖರಾದ ಮಾನ್ಯ ಸಂಘಚಾಲಕ ಡಾ. ಬಾಲಕೃಷ್ಣ ಬಿ.ಸಿ.ರೋಡ್, ಉಪಾಧ್ಯಕ್ಷರಾದ ಶಶಿ ಕುಮಾರ್ ಇಂದ್ರ ವೇಣೂರು, ಕೋಶಾಧಿಕಾರಿ ವಿಜಯ ಶೆಟ್ಟಿ ಸಾಲೆತ್ತೂರ್, ಸಂಕಪ್ಪ ಶೆಟ್ಟಿ ಬಿ. ಸಿ.ರೋಡ್, ಜನಾರ್ದನ ಅಮುoಜೆ ಮತ್ತಿತರರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಸೂರಿಕುಮೇರು ಕೆ ಗೋವಿಂದ ಭಟ್ ರೊಡನೆ ಸಂವಾದ ನಡೆಯಿತು. ಆರಂಭದಲ್ಲಿ ಉಪನ್ಯಾಸಕ ಜಯಾನಂದ ಪೆರಾಜೆ ಹಾಗೂ ಡಾ.ವಾರಿಜ ನಿರ್ಬೈಲು ಇವರು ಗಮಕ ಕಾರ್ಯಕ್ರಮ ನಡೆಸಿಕೊಟ್ಟರು.

ಜಿಲ್ಲಾ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಪ್ರಾಸ್ತಾವಿಸಿ, ಸಂಸ್ಕಾರ ಭಾರತೀ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಸ್ವಾಗತಿಸಿದರು. ಮಾನಸ ಕಡೆಗೋಳಿ ಸಂಸ್ಕಾರ ಧ್ಯೇಯ ಗೀತೆ ಹಾಡಿದರು. ವಿಜಯ ಶೆಟ್ಟಿ ಸಾಲೆತ್ತೂರು ಸನ್ಮಾನ ಪತ್ರವಾಚಿಸಿದ್ದು, ಜಗದೀಶ ಕಡೆಗೋಳಿ ಧನ್ಯವಾದವಿತ್ತರು. ಜಗದೀಶ ಕಡೆಗೋಳಿ ವಂದಿಸಿ, ಮಹಿಮಾ ಬಿ. ರೈ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *