ಮಂಗಳೂರು,ಉಡುಪಿ ಚಿನ್ನದಂಗಡಿಗಳಿಗೆ ಶಿರ್ವದ ಚಾಲಾಕಿ ಮಹಿಳೆಯಿಂದ ಮೋಸ

ಉಡುಪಿ: ಮಗುವಿನ ನಾಮಕರಣವನ್ನು ನೆಪವಾಗಿಟ್ಟುಕೊಂಡ ಚಾಲಕಿ ಮಹಿಳೆಯೊಬ್ಬಳು ಹಲವು ಚಿನ್ನದಂಗಡಿಗಳಿಗೆ ಮೋಸ ಮಾಡಿ ವಂಚನೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಶಿರ್ವದಲ್ಲಿ ನಡೆದಿದೆ.

ಶಿರ್ವ ಮಸೀದಿ ಬಳಿಯ ನಿವಾಸಿಯಾಗಿರುವ ಫರೀದಾ ಎಂಬಾಕೆ 3 ಚಿನ್ನಾಭರಣ ಮಳಿಗೆಗಳಿಗೆ ಸುಮಾರು 9,74,043 ಲಕ್ಷ ರೂಪಾಯಿ ವಂಚನೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಮೊದಲಿಗೆ ಈಕೆ ತಾನು ಶಿರ್ವ ಮಸೀದಿ ಬಳಿಯ ನಿವಾಸಿ ಎಂದು ಪರಿಚಯಿಸಿಕೊಂಡು ವಾಟ್ಸಾಪ್ ಮೂಲಕ ಆಭರಣದ ಫೋಟೋಗಳನ್ನು ತರಿಸಿಕೊಂಡು ಆಯ್ಕೆ ಮಾಡುತ್ತಾಳೆ.

ಬಳಿಕ ಭಧ್ರತೆಗಾಗಿ ಚೆಕ್ ನ್ನು ಸಂಬಂಧಿ ಮೂಲಕ ಕಳುಹಿಸಿ ಕೊಡುತ್ತಾಳೆ. ಸಂಬಂಧಿಯೊಬ್ಬ ಬಂದು ಚೆಕ್ ನ್ನು ಆಭರಣದ ಅಂಗಡಿ ಮಾಲಕರಿಗೆ ಚೆಕ್ ಕೊಟ್ಟು ಆಭರಣವನ್ನು ತೆಗೆದುಕೊಂಡು ಹೋಗುತ್ತಾನೆ.

ಆದ್ರೆ ಬ್ಯಾಂಕ್ ಗೆ ಹೋಗಿ ಚೆಕ್ ಮಾಡಿದಾಗ ಚೆಕ್ ಬೌನ್ಸ್ ಆಗಿರುವ ಮಾಹಿತಿ ಲಭ್ಯವಾಗುತ್ತದೆ. ಸಂಪರ್ಕಕ್ಕೆ ಪ್ರಯತ್ನಿಸಿದಾಗ ಸಂಪರ್ಕಕ್ಕೂ ಸಿಗದೇ ಇದ್ದಾಗ ತಾನು ಮೋಸ ಹೋಗಿರುವುದು ಅಂಗಡಿ ಮಾಲಕರಿಗೆ ಅರಿವಿಗೆ ಬರುತ್ತದೆ.

ಮೋಸ ಹೋಗಿರುವ ಅಂಗಡಿ ಮಾಲಕ ಶಿರ್ವದ ಗಣೇಶ್ ಅವರು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತ ಆರೋಪಿ ಮತ್ತು ಆಕೆಯ ತಂಡ ಯಾರ ಸಂಪರ್ಕಕ್ಕೂ ಲಭಿಸದೆ ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ಆರೋಪಿ ಫರೀದಾ ಮತ್ತವಳ ತಂಡ ಮಂಗಳೂರು, ಬಜಪೆ, ಸುರತ್ಕಲ್, ಕಿನ್ನಿಗೋಳಿ, ಕೂಳೂರು ಮುಂತಾದ ಕಡೆ ಆಭರಣ ಖರೀದಿಸಿ ವಂಚಿಸಿದೆ.

ಇದೇ ತಂಡ ಪಡುಬಿದ್ರಿ ಮತ್ತು ತ್ರಾಸಿಯಲ್ಲಿ ಕೂಡ ಇದೇ ರೀತಿ ವಂಚಿಸಲು ಪ್ರಯತ್ನಿಸಿದ್ದು, ವಂಚಕರ ಬಗ್ಗೆ ತಿಳಿದಿದ್ದ ಅಂಗಡಿ ಮಾಲಕರು ಆಭರಣ ನೀಡದೆ ವಂಚನೆಯಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *