Breaking
13 May 2026, Wed

ಹಿಂದೂ ಸಂಘಟನೆಗಳ ಪ್ರಮುಖರನ್ನು ಉದ್ದೇಶಿಸಿ ಸಾರ್ವಜನಿಕವಾಗಿ ನಿಂದಿಸಿದ ಆರೋಪ: ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ದೂರು

ಪುತ್ತೂರು: ಪುತ್ತೂರಿನ ಶಾಸಕ ಅಶೋಕ್ ರೈ ಹಿಂದೂ ಸಂಘಟನೆಗಳ ಪ್ರಮುಖರನ್ನು ಉದ್ದೇಶಿಸಿ ಸಾರ್ವಜನಿಕವಾಗಿ ನಿಂದಿಸಿ ಪ್ರಚೋದನಕಾರಿ ಹೇಳಿಕೆ ನೀಡಿರುವುದರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ಹಿಂದೂ ವೇದಿಕೆ ಮನವಿ ಮಾಡಿದರು.

ಬಳಿಕ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ಮೋಹನ್ ದಾಸ್ ಕಾಣಿಯೂರು ಅವರು ದ.ಕ. ಜಿಲ್ಲೆಯಲ್ಲಿ ನೂತನ ಎಸ್ಪಿ ಹಾಗೂ ಕಮಿಷನರ್ ಅಧಿಕಾರ ವಹಿಸಿಕೊಂಡ ನಂತರ ಎಲ್ಲವೂ ಶಾಂತಿಯುತವಾಗಿ ಸಾರ್ವಜನಿಕ ವಲಯದಲ್ಲಿ ಭಯಮುಕ್ತವಾಗಿತ್ತು.

ಇದೆಲ್ಲದರ ಮಧ್ಯೆ ಪುತ್ತೂರು ತಾಲೂಕಿನ ಶಾಸಕ ಅಶೋಕ್ ಕುಮಾರ್ ರೈಯವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೊಸ ಎಸ್ಪಿಯವರು ಮತ್ತು ಕಮಿಷನರ್ ಬಂದ ನಂತರ ಪರಿವಾರ ಸಂಘಟನೆಗಳು ಪ್ರಮುಖರನ್ನು ಪೋಲಿಸ್ ಇಲಾಖೆ ಬೆತ್ತಲೆ ಮಾಡಿ ಚಡ್ಡಿಯಲ್ಲಿ ನಿಲ್ಲಿಸಿ ಫೋಟೋವನ್ನು ತೆಗೆದುಕೊಂಡು ಹೋಗಿದ್ದಾರೆ.

ಮುಂದಿನ ದಿನಗಳಲ್ಲಿ ಸ್ಲೇಟು ಕೊಟ್ಟು ಕೂರಿಸುತ್ತಾರೆ ಎಂದು ಅವಮಾನಕರ ರೀತಿಯಲ್ಲಿ ಲೇವಡಿ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು.

ಪುತ್ತೂರು ಹಿಂದೂ ಜಾಗರಣ ವೇದಿಕೆ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್ ಮಡಿಕೇರಿ ಅವರು ಮಾಡಿದ ಭಾಷಣದ ಕುರಿತಂತೆ “ಅವ ಯಾವನೋ ಒಬ್ಬ ಅವ ಎಲ್ಲಿಂದಲೋ ಬಂದ ಮುಟ್ಟಾಳ ಇಲ್ಲಿ ಬಂದು ಮಾತನಾಡಿದ್ದಾನೆ.

ಅವ ಸ್ವಲ್ಪ ಹೊತ್ತು ಪುತ್ತೂರಲ್ಲಿ ನಿಲ್ಲಬೇಕಿತ್ತು ಅವನಿಗೆ ಬುದ್ಧಿಯನ್ನು ಕಲಿಸುವ ಕೆಲಸವನ್ನು ನಾವು ಮಾಡ್ತಾ ಇದ್ದೆವು. ಅವರನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಎಲ್ಲಾ ಕಡೆಯಿಂದಲೂ ಇದೆ ಎಂದು ಉಲ್ಲೇಖಿಸುತ್ತಾ “ಮಸಲ್ ಪವರ್ ಇದೆ” ಎಂದು ಕೂಡ ಪಂಥಾಹ್ವಾನ ನೀಡುವಂತೆ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿರುತ್ತಾರೆ.

ಈ ರೀತಿಯ ಗೂಂಡಾಗಿರಿಯನ್ನು ಒಬ್ಬ ಜನಪ್ರತಿನಿಧಿಯಾಗಿ ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ದರ್ಪವನ್ನು ತೋರಿಸಿರುವುದು ಪ್ರಚೋದನಕಾರಿಯಾಗಿರುತ್ತದೆ. ಆದ್ದರಿಂದ ಹಿಂದು ಸಂಘಟನೆಗಳ ಬಗ್ಗೆ ಕೀಳು ಮಟ್ಟದ ಪದ ಬಳಸಿ ಸಾರ್ವಜನಿಕವಾಗಿ ಅಶಾಂತಿಯನ್ನುಂಟು ಮಾಡುವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡಿರುತ್ತಾರೆ. ಹಾಗಾಗಿ ಇವರ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.

ಇನ್ನು ಅಶೋಕ್ ರೈ ಅವರಿಗೆ ಪುತ್ತೂರಿನ ಜನ ಮುಂದಿನ ದಿನಗಳಲ್ಲಿ ಯಾವ ರೀತಿ ಬುದ್ಧಿ ಕಲಿಸುತ್ತಾರೆ ಎಂಬುದನ್ನು ಅವರು ಕಾದು ನೋಡಲಿ ಎಂದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಣಿ ಸದಸ್ಯರಾದ ರವಿರಾಜ್ ಶೆಟ್ಟಿ ಕಡಬ, ಸಹ ಸಂಯೋಜಕರಾದ ದಿನೇಶ್ ಪಂಜಿಗ, ಭರತ್ ಈಶ್ವರಮಂಗಳ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಅನೂಪ್ ಆಳ್ವ, ತಾಲೂಕು ಸಹ ಸಂಯೋಜಕರಾದ ಶಿವಪ್ರಸಾದ್ ಶಾಂತಿಗೋಡು, ಸಹ ಸಂಯೋಜಕರಾದ ಸಂತೋಷ್ ಮುಂಡೂರು, ಲತೇಶ್ ಕೆಮ್ಮಾಯಿ, ಆರ್ಯಾಪು ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ನಾಗೇಶ್ ಕೆಮ್ಮಾಯಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *