ಬೀರಮಲೆ ಬೆಟ್ಟದಲ್ಲಿ ಅಪ್ರಾಪ್ತರಿಗೆ ಕಿರುಕುಳ – ಇಬ್ಬರು ಬಂಧನ

ಪುತ್ತೂರು: ನಗರದ ಪ್ರೇಕ್ಷಣಿಯ ಸ್ಥಳವಾಗಿರುವ ಬೀರಮಲೆ ಬೆಟ್ಟದಲ್ಲಿ ಅಪ್ರಾಪ್ತ ವಯಸ್ಕರಿಬ್ಬರನ್ನು ತಡೆದು ಅವರ ಫೋಟೋ, ವೀಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆ ಜೂನ್ 5 ರಂದು ನಡೆದಿದ್ದು, ಆರೋಪಿ ಇಬ್ಬರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಕಡಬ ತಾಲೂಕಿನ ಕುದ್ಮಾರು ನಿವಾಸಿ ಪುರುಷೋತ್ತಮ (43) ಹಾಗೂ ಪುತ್ತೂರು ತಾಲೂಕಿನ ಆರ್ಯಾಪು ನಿವಾಸಿ ರಾಮಚಂದ್ರ (38) ಎಂದು ಗುರುತಿಸಲಾಗಿದೆ.

ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನಂತೆ ನನ್ನ ಪುತ್ರ ಪರಿಚಯದ ಬಾಲಕಿಯೊಂದಿಗೆ ಬೀರಮಲೆ ಬೆಟ್ಟದಲ್ಲಿ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಇಬ್ಬರೂ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಅನ್ಯಧರ್ಮದವನೆಂದು ಆರೋಪ ಮಾಡಿ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಕರೆದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆ ಹಾಕಿದ್ದರು.

ನನ್ನ ಪುತ್ರನನ್ನು ಅನ್ಯಧರ್ಮದವ ಎಂದು ಪ್ರಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ಕೋಮು ಸಾಮರಸ್ಯ ಕದಡಲು ಹಾಗೂ ಧರ್ಮಗಳ ನಡುವೆ ದ್ವೇಷ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ಮಾಡಿದ ಆರೋಪದ ಮೇಲೆ ಇಬ್ಬರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

Leave a Reply

Your email address will not be published. Required fields are marked *